ಉಡುಪಿ: ಮನುಷ್ಯ ಮನುಷ್ಯರಿಗೆ ಸಹಾಯ ಮಾಡುವುದು ಕಷ್ಟ. ಆದರೆ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಗರಹಾವನ್ನು ರಕ್ಷಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಆತ್ರಾಡಿಯ ಶ್ರೀನಿವಾಸ ಆಚಾರ್ಯ ಎಂಬವರ ಮನೆಯ ಬಳಿ ಇರುವ 40 ಅಡಿ ಬಾವಿಗೆ ತಿಂಗಳ ಹಿಂದೆ ನಾಗರಹಾವೊಂದು ಬಿದ್ದಿತ್ತು. ಬೆಳಗ್ಗೆ ನೀರು ಸೇದುವಾಗ ಹಾವು ಕಾಣಿಸಿಕೊಳ್ಳುತ್ತಿತ್ತು. ಹಾವು ಬಾವಿಯಿಂದ ಹೊರ ಹೋಗಬಹುದು ಎಂದು ಕಾದು ಕಾದು ಸುಸ್ತಾದ ಮನೆಯವರು ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ನೀಡಿ ಕರೆಸಿದ್ದಾರೆ.
ಮಾಹಿತಿ ತಿಳಿದು ಇಂದು ಸ್ಥಳಕ್ಕೆ ಬಂದು ಸನಿಲ್ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು, ಒಂದು ಕೈಯ್ಯಲ್ಲಿ ಹಗ್ಗ, ಮತ್ತೊಂದು ಕೈಯ್ಯಲ್ಲಿ ಕಬ್ಬಿಣದ ಸ್ಟಿಕ್ ಹಿಡಿದು ಬಾವಿಗೆ ಇಳಿದ್ದಾರೆ. ಈ ವೇಳೆ ನೀರಿನಲ್ಲಿ ಈಜಾಡುತ್ತಾ ಹೆಡೆಯೆತ್ತಿ ಬುಸುಗುಡುತ್ತಿದ್ದ ಹಾವನ್ನು ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಈ ವೇಳೆ ಹಾವು ಮೂರು ನಾಲ್ಕು ಬಾರಿ ಗುರುರಾಜ್ ಸನಿಲ್ ಅವರಿಗೆ ಕಚ್ಚಲು ಮುಂದಾಗಿದೆ. ಯಾವುದನ್ನು ಲೆಕ್ಕಿಸದ ಗುರುರಾಜ್ ಕೊನೆಗೂ ಹಾವನ್ನು ಬಾವಿಯಿಂದ ರಕ್ಷಣೆ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಗುರುರಾಜ್ ಸನಿಲ್ ಅವರು ಇದುವರೆಗೂ ಮೂವತ್ತು ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಹಾವಿನ ರಕ್ಷಣೆ ನಂತರ ತಮ್ಮ ಅನುಭವವನ್ನು ಹಂಚಿಕೊಂಡ ಅವರು ಇದುವರೆಗೂ ನಡೆಸಿದ ಕಾರ್ಯಾಚರಣೆಗಿಂತ ಈ ಕಾರ್ಯಾಚರಣೆ ಬಹಳ ಅಪಾಯಕಾರಿಯಾಗಿತ್ತು ಎಂದು ಅವರು ಹೇಳಿದ್ದಾರೆ.