ದಾವಣಗೆರೆ: ನಾಗರ ಹಾವೊಂದು ಮಹಿಳೆಯನ್ನು ಟಾರ್ಗೆಟ್ ಮಾಡಿ ವಾರದಲ್ಲಿ ಮೂರು ಸಲ ಕಚ್ಚಿರುವ ಘಟನೆ ದಾವಣಗೆರೆಯ ಹರಿಹರ ಪಟ್ಟಣದಲ್ಲಿ ನಡೆದಿದೆ
ನಗರದ ಜೆಸಿ ಬಡಾವಣೆ ನಿವಾಸಿ ಕಮಲ್ ತಾಜ್(32) ಹಾವಿನ ದ್ವೇಷಕ್ಕೆ ಗುರಿಯಾದ ಮಹಿಳೆ. ಕಳೆದ ಒಂದು ವಾರದಿಂದ ನಾಗರಹಾವು ಮಹಿಳೆಯನ್ನು ಬೆಂಬಿಡದೆ ಕಾಡುತ್ತಿದೆ. ನಾಲ್ಕು ದಿನಗಳ ಹಿಂದೆ ಹಾವು ಕಚ್ಚಿದ್ದು, ಚಿಕಿತ್ಸೆ ಪಡೆದು ಮನೆಗೆ ಹೋಗುತ್ತಿದ್ದಂತೆ ಮತ್ತೆ ಹಾವು ಕಚ್ಚಿದೆ.
ಹಾವು ಕಚ್ಚಿದ ಪರಿಣಾಮ ಮಹಿಳೆಯನ್ನು ಹರಿಹರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಎಲ್ಲ ಬೆಳವಣಿಗೆಯ ನಂತರ ನಾಗ ದೋಷ ಇರಬೇಕೆಂದು ಶಂಕಿಸಿ ಭಾನುವಾರ ಧಾರ್ಮಿಕ ಸ್ಥಳಗಳಿಗೆ ಪೂಜೆ ಸಲ್ಲಿಸಲು ಹೋಗಿದ್ದರು. ಆದರೆ ಸುಸ್ತು ಕಂಡ ಹಿನ್ನೆಲೆಯಲ್ಲಿ ಕಮಲ್ ತಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಮಲ್ ತಾಜ್ ಅವರಿಗೆ ಬಾಲ್ಯದಲ್ಲಿ ಒಂದು ಸಲ ಹಾವು ಕಚ್ಚಿತ್ತು. ಆದರೆ ಈಗ ಒಂದೇ ಹಾವು ವಾರದಲ್ಲಿ ಮೂರು ಸಲ ಕಚ್ಚಿದೆ. ಸದ್ಯ ಕಮಲ್ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಕಮಲ್ ತಾಜ್ ಇಂದು ಮತ್ತೆ ಕೆಲ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದರು. ಆದರೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ದೇವರ ದರ್ಶನ ಬಿಟ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ.