ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಅವರ ಪುತ್ರಿ ಗೋವಾದ ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ, ನೆಟ್ಟಾ ಡಿಸೋಜಾ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು 2 ಕೋಟಿ ಸಿವಿಲ್ ಮಾನನಷ್ಟ ಮೊಕದ್ದಮೆ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ದಾಖಲೆಗಳನ್ನು ಪರಿಶೀಲಿಸಿ, ಕಾಂಗ್ರೆಸ್ ಮುಖಂಡರು ಬಿಜೆಪಿಯ ನಾಯಕಿ ಸ್ಮೃತಿ ಇರಾನಿ ಹಾಗೂ ಅವರ ಪುತ್ರಿಯ ಮೇಲೆ ಸುಳ್ಳು ಆರೋಪವನ್ನು ಮಾಡುವ ಮೂಲಕ ವೈಯಕ್ತಿಕವಾಗಿ ದಾಳಿ ನಡೆಸಲು ಪಿತೂರಿ ನಡೆಸುತ್ತಿದ್ದಾರೆ. ದಾಖಲೆಯಲ್ಲಿರುವ ಸಾಕ್ಷಿಗಳನ್ನು ಪರಿಗಣಿಸಿದರೆ ಸ್ಮೃತಿ ಇರಾನಿ ಹಾಗೂ ಅವರ ಮಗಳ ಪರವಾಗಿ ಯಾವುದೇ ಲೈಸನ್ಸ್ಗಳಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದರಿಂದಾಗಿ ಸ್ಮೃತಿ ಇರಾನಿ ಮಗಳು ರೆಸ್ಟೋರೆಂಟ್‌ನ ಮಾಲೀಕರಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಪದಕ ಗೆದ್ದಾಗಿದೆ ಇನ್ನಾದರೂ ಸಿನಿಮಾ ನೋಡು – ಚಿನ್ನದ ಹುಡುಗ ಅಚಿಂತ್‌ಗೆ ಮೋದಿ ಸಂದೇಶ
ಸ್ಮೃತಿ ಇರಾನಿ ಅವರನ್ನು ಉದ್ದೇಶಪೂರ್ವಕವಾಗಿ ಸಾರ್ವಜನಿಕ ನಿಂದನೆಗೆ ಒಳಪಡಿಸಲು, ನೈತಿಕ ಚಾರಿತ್ರ‍್ಯಹರಣ, ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತರಲು ಕಾಂಗ್ರೆಸ್‌ನ ಮೂವರು ನಾಯಕರು ದುರುದ್ದೇಶಪೂರಿತ ಹೇಳಿಕೆ ನೀಡಿದಂತಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಘಟನೆಯೇನು?: ಸ್ಮೃತಿ ಇರಾನಿ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳಿವೆ. ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಅದರಲ್ಲಿ ಬಾರ್ ಕೂಡ ಇದ್ದು, ನಕಲಿ ಪರವಾನಗಿ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿಸೋಜಾ ಆರೋಪಿಸಿದ್ದರು. ಕೂಡಲೇ ಸ್ಮೃತಿ ಇರಾನಿ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು. ಪುತ್ರಿಯ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ಈ ಆರೋಪ ಸುಳ್ಳು ಎಂದು ಹೇಳಿ ಕಾಂಗ್ರೆಸ್ ನಾಯಕರ ವಿರುದ್ಧ ೨ ಕೋಟಿ ರೂ. ಮಾನನಷ್ಟ ಕೇಸ್ ಹೂಡಿದ್ದರು. ಇದನ್ನೂ ಓದಿ: ಉತ್ತಮ ನಾಯಕನಿಂದ ನಾಯಕರ ಸೃಷ್ಟಿ, ಹಿಂಬಾಲಕರಲ್ಲ- ವಾಟ್ಸಪ್‍ನಲ್ಲಿ ಡಿಕೆಶಿ ಭಾಷಣ ಲೀಕ್