– ತಾಯಿ, ಅಣ್ಣ, ಅಕ್ಕ, ತಂಗಿ ಪ್ಲೇಗ್‌ಗೆ ಬಲಿ
ಭೈರಪ್ಪನವರು (SL Bhyrappa) ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತಾಗಿದ್ದರು. ಆದರೆ ಹೇಗೋ ಇದರಿಂದ ಪಾರಾಗಿದ್ದರೂ ಅವರ ಕುಟುಂಬ ಸದಸ್ಯರು ಪ್ಲೇಗ್ ಬಲಿಯಾಗಿದ್ದರು.
ಅವರೇ ಹೇಳುವಂತೆ, ನನಗೆ 11ನೇ ವಯಸ್ಸು ಇದ್ದಾಗ ತಾಯಿ ಪ್ಲೇಗ್‌ಗೆ ತುತ್ತಾಗಿದ್ದರು. ಇದಕ್ಕೂ ಮೊದಲು ಅಣ್ಣ, ಅಕ್ಕ ಪ್ಲೇಗ್ ಬಂದು ಒಂದೇ ದಿವಸ ಒಂದು ಗಂಟೆಯ ಒಳಗಡೆ ಮೃತಪಟ್ಟರು. ತಾಯಿ ಮೃತಪಟ್ಟು 3 ವರ್ಷದ ನಂತರ ತಂಗಿ ಮೃತಪಟ್ಟಳು. ಒಂದು ವರ್ಷದ ಬಳಿಕ ತಮ್ಮ ಸಾವನ್ನಪ್ಪಿದ್ದ. ತಮ್ಮನ ಹೆಣವನ್ನು ನಾನು ಹೊತ್ತುಕೊಂಡು ಹೋಗಿ ಸುಟ್ಟು ಬಂದಿದ್ದೆ. ನನಗೂ ಪ್ಲೇಗ್ ಬಂದಿತ್ತು. ಆದರೆ ನನು ಹೇಗೂ ಪಾರಾಗಿದ್ದೆ ಎಂದು ಹೇಳಿದ್ದರು.
ಶಾಲೆ ಓದುವ ಸಮಯದಲ್ಲಿ ಭೈರಪ್ಪ ಅವರ ತಾಯಿ ಇವರನ್ನು ಸೋದರ ಮಾವನ ಮನೆಯಲ್ಲಿ ಬಿಟ್ಟಿದ್ದರು. ಸ್ಥಳೀಯ ದೇವಾಲಯದಲ್ಲಿ ಸೋದರ ಮಾವ ಅರ್ಚಕರಾಗಿದ್ದರು. ಸ್ವತಃ ಭೈರಪ್ಪ ಅವರೇ ಹೇಳಿಕೊಂಡಿದ್ದ ಹಾಗೆ ಸೋದರ ಮಾವನ ಮನೆಯಲ್ಲಿದ್ದ ದಿನಗಳು ಅತ್ಯಂತ ಕಷ್ಟವಾಗಿದ್ದವು. ಆತನ ಬೈಗುಳಗಳಿಂದ ನಾನು ಹೆದರಿ ಹೋಗಿದ್ದೆ ಎಂದು ತಮ್ಮ ಆತ್ಮಚರಿತ್ರೆ ʼಭಿತ್ತಿʼಯಲ್ಲಿ ಬರೆದಿದ್ದಾರೆ.
ತಮ್ಮ ಪ್ಲೇಗ್‌ನಿಂದ ಮೃತಪಟ್ಟಾಗ ಅಂತ್ಯಸಂಸ್ಕಾರ ಮಾಡಲು ಯಾರೂ ಸಹಾಯ ಮಾಡಿರಲಿಲ್ಲ. ಆಗ ಭೈರಪ್ಪ ಅವರೇ ತಮ್ಮನ ಶವವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿ ಬಂದಿದ್ದರು.
“ಆಗ ತಾನೆ ಟೆಂಟ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದೆ. ಆಗ ಅಲ್ಲಿಗೆ ಬಂದ ವ್ಯಕ್ತಿ ಭೈರಪ್ಪ ಅಂದ್ರೆ ನೀನೇ ಏನೋ, ನಿನ್ನ ತಮ್ಮ ತೀರೀಹೋದ್ನಂತೆ ಎಂದರು. ಆತ ಸತ್ತು ಬಿದ್ದಿದ್ದಾನೆ. ನಮ್ಮ ಜಾತಿಯವರು ಕೂಡ ಯಾರೂ ಬರಲಿಲ್ಲ. ‘ಸ್ಮಶಾನಕ್ಕೆ ಹೊತ್ತುಕೊಂಡು ಹೋಗಬೇಕು. ತಿಥಿ ಮಾಡಬೇಕು..’ ನಮಗೆ ಯಾಕೆ ಬೇಕು ಇದು ಅಂತಾ ಹೇಳ್ತಿದ್ದರು. ನನ್ನ ಅಪ್ಪ ಸಾಲ ತೆಗೆದುಕೊಂಡ್ರೆ ಯಾರಿಗೂ ವಾಪಾಸ್ ನೀಡುತ್ತಿರಲಿಲ್ಲ. ಹಾಗಾಗಿ ಹೆಣ ಹೆತ್ತುಕೊಂಡು ಹೋಗಲು ಯಾರೂ ಬರಲಿಲ್ಲ. ಅವ 6 ವರ್ಷದ ಮಗು. ನನಗೆ 16 ವರ್ಷ. ಅವನ ಹೆಣವನ್ನು ಹೆಗಲ ಮೇಲೆ ಹಾಕ್ಕೊಂಡು ಸ್ಮಶಾನಕ್ಕೆ ಹೋಗಿದ್ದೆ. ಅದರೊಂದಿಗೆ ಮಡಿಕೆಯನ್ನು ಕೈಯಲ್ಲಿ ಹಿಡಿದಿದ್ದೆ. ಸ್ಮಶಾನದಲ್ಲಿ ನಾನೇ ಅವನ ಮೃತದೇಹಕ್ಕೆ ಬೆಂಕಿ ಇಟ್ಟೆ. ಸಾಮಾನ್ಯವಾಗಿ ಶವ ಸಂಸ್ಕಾರ ಮಾಡೋವಾಗ ಬುರುಡೆ ಒಡಿಯೋತನಕ ಇರಬೇಕು. ಅಲ್ಲಿಯವರೆಗೂ ಜೀವ ಇರುತ್ತೆ ಅಂತಾರೆ. ನನ್ನ ಜೊತೆಗಿದ್ದ ವ್ಯಕ್ತಿ ಅದನ್ನ ಹೇಳಿಕೊಟ್ಟ.ನಾನು ಅದನ್ನು ಮಾಡಿ ಅಲ್ಲಿಂದ ಬಂದಿದ್ದೆ. ಆದರೆ, ಮನಗೆ ಬಂದರೆ ತಿನ್ನೋಕೆ ಏನೂ ಇಲ್ಲ” ಎಂದು ಭೈರಪ್ಪ ಅವರು ಹೇಳಿದ್ದರು.