ಹಾಸನ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಎಸ್‍ಐಟಿ (SIT) ಅಧಿಕಾರಿಗಳು ಅವರ ಹೊಳೆನರಸೀಪುರದ (Holenarasipur) ಚೆನ್ನಾಂಬಿಕಾ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಈ ಮೂಲಕ 43 ದಿನಗಳ ಬಳಿಕ ಹೊಳೆನರಸೀಪುರಕ್ಕೆ ಪ್ರಜ್ವಲ್ ಆಗಮನವಾಗಿದೆ.
ಡಿವೈಎಸ್‍ಪಿ ಸತ್ಯನಾರಾಯಣ ನೇತೃತ್ವದಲ್ಲಿ ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಮಾಧ್ಯಮಗಳ ಕ್ಯಾಮೆರಾಗಳಿಗೆ ಕಾಣದಂತೆ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಎಸ್‍ಐಟಿ ಅಧಿಕಾರಿಗಳೊಂದಿಗೆ ಎಫ್‍ಎಸ್‍ಎಲ್ ಅಧಿಕಾರಿಗಳು ಸಹ ಮಾಹಿತಿ ಕಲೆಹಾಕುತ್ತಿದ್ದಾರೆ.
ಚೆನ್ನಾಂಬಿಕಾ ನಿವಾಸದ ಎದುರು ಎಎಸ್‍ಪಿ ವೆಂಕಟೇಶ್ ನಾಯ್ಡು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬಂಧನಕ್ಕೊಳಗಾಗಿರುವ ಆರೋಪಿ ಪ್ರಜ್ವಲ್ ಹಲವು ಮಹಿಳೆಯ ಜೊತೆ ಇದ್ದಾರೆ ಎನ್ನಲಾದ ವೀಡಿಯೋ ವೈರಲ್ ಆಗಿತ್ತು. ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಅವರು ಜರ್ಮನಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಸುಮಾರು 34 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ಜರ್ಮನಿಯಲ್ಲಿದ್ದರು. ಬಳಿಕ ಭಾರತಕ್ಕೆ ಮರಳುತ್ತಿದ್ದಂತೆ ಎಸ್‍ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.