ಉಡುಪಿ: ಗಾನ ಗಂಧರ್ವ, ಪದ್ಮಭೂಷಣ ಡಾ.ಜೇಸುದಾಸ್ ಅವರು ತಮ್ಮ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಆಚರಿಸಿಕೊಂಡರು. ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ದೇವಿಗೆ ವರ್ಷದ ಹರಕೆ ಸಲ್ಲಿಸಿ 81ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು. ಈ ಬಾರಿ ಕುಟುಂಬದ ಎಲ್ಲಾ ಸದಸ್ಯರನ್ನು ಕರೆತಂದು ದೇವರ ಪೂಜೆ ಹೋಮದಲ್ಲಿ ಸಂಗೀತ ಮಾಂತ್ರಿಕ ಭಾಗಿಯಾದರು.
ಜೇಸುದಾಸ್ ಉಡುಪಿಯ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದೇವಸ್ಥಾನಕ್ಕೆ ಆಗಮಿಸಿದ ಅವರು, ಮೊದಲು ಮೂಕಾಂಬಿಕೆಗೆ ಪೂಜೆ ಸಲ್ಲಿಸಿದರು. ನಂತರ ಯಜ್ಞಶಾಲೆಯಲ್ಲಿ ಚಂಡಿಕಾಹೋಮ ನೆರವೇರಿಸಿದರು.
Advertisement
Advertisement
ಜೇಸುದಾಸ್ ಕೊಲ್ಲೂರಿನಲ್ಲಿ ಕಳೆದ 30 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ತಮಗೆ ಮಕ್ಕಳಾಗದ ಸಂಕಟವನ್ನು ಮೂಕಾಂಬಿಕೆಯ ಸನ್ನಿಧಿಯಲ್ಲಿ ಹೇಳಿಕೊಂಡಿದ್ದರು. ನಂತರ ಜೇಸುದಾಸ್ ಅವರಿಗೆ ಮಕ್ಕಳಾದವು. ಹೀಗಾಗಿ ಅವರು ಪ್ರತಿ ವರ್ಷ ಕೊಲ್ಲೂರಿಗೆ ಬಂದು ದೇವರ ಸೇವೆಯೊಂದಿಗೆ ಸಂಗೀತ ಸೇವೆ ನೀಡುತ್ತಾ ಬಂದಿದ್ದಾರೆ. ಸಂಗೀತ ಮಾಂತ್ರಿಕ ಬರುವ ಹಿನ್ನೆಲೆಯಲ್ಲಿ ಭಕ್ತರ, ಸಂಗೀತ ಪ್ರೇಮಿಗಳ ಸಂಖ್ಯೆಯೂ ಕೊಲ್ಲೂರಿನಲ್ಲಿ ಜಾಸ್ತಿಯಾಗಿತ್ತು.
Advertisement
ದೇವಸ್ಥಾನದ ಪ್ರಾಂಗಣ ಸಂಗೀತ ರಸಿಕರಿಂದ ತುಂಬಿಕೊಂಡಿತ್ತು. ಪ್ರತಿ ವರ್ಷ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಜೇಸುದಾಸ್ ಅಭಿಮಾನಿಗಳು ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಾರೆ. ದೇಶಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಜೇಸುದಾಸ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಪ್ರತಿ ವರ್ಷ ಸಂಗೀತ ಸೇವೆ ಸಲ್ಲಿಸುತ್ತಿದ್ದ ಜೇಸುದಾಸ್ ಅವರು ಅನಾರೋಗ್ಯದ ಕಾರಣ ದೇವಿಯ ಸನ್ನಿಧಾನದಲ್ಲಿ ಹಾಡಲಿಲ್ಲ. ಎಂದಿನಂತೆ ದೇವಿಗೆ ಪ್ರಾರ್ಥನೆ ಮತ್ತು ಚಂಡಿಕಾಹೋಮ ಸಲ್ಲಿಸಿದರು.
Advertisement
ಗೋವಿಂದ ಅಡಿಗ ಮತ್ತು ಜಯರಾಮ ಮಾತನಾಡಿ, ಜೇಸುದಾಸ್ ಮೂಕಾಂಬಿಕಾ ದೇವಿಯ ಪರಮ ಭಕ್ತ. ಎಷ್ಟೇ ಒತ್ತಡ ಇದ್ದರೂ ಅವರ ಹುಟ್ಟುಹಬ್ಬದ ದಿನ ಕೊಲ್ಲೂರಿಗೆ ಬಂದೇ ಬರುತ್ತಾರೆ. ಅವರ ಲವಲವಿಕೆ, ಈ ವಯಸ್ಸಿಗೂ ಅವರ ಸ್ವರ ಮಾಧುರ್ಯ ದೇವರ ಸಿದ್ಧಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.