ಸಿಂಗಾಪುರ: ಇಲ್ಲಿ ಮತ್ತೊಂದು ತೀವ್ರ ಕೋವಿಡ್-19 (COVID-19) ಅಲೆಯಿದ್ದು, ಮೇ 5 ಮತ್ತು 11 ರ ನಡುವೆ ಅಂದರೆ ಒಂದೇ ವಾರದಲ್ಲಿ ಪ್ರಕರಣಗಳ ಸಂಖ್ಯೆ 25,900 ಕ್ಕೆ ಏರಿದೆ. ಈ ಪೈಕಿ 13,700 ಪ್ರಕರಣಗಳು ಮೊದಲ ವಾರದಲ್ಲಿ ದೃಢಪಟ್ಟಿವೆ. ವೈರಸ್ ಹರಡುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ (Mask) ಧರಿಸುವಂತೆ ಸಿಂಗಾಪುರದ ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಒತ್ತಾಯಿಸಿದ್ದಾರೆ.
ನಾವು ಕೊರೋನಾ ಅಲೆಯ ಆರಂಭಿಕ ಭಾಗದಲ್ಲಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದ್ದರಿಂದ ಮುಂದಿನ 2 ಅಥವಾ 4 ವಾರಗಳಲ್ಲಿ ಅಲೆಯು ಜಾಸ್ತಿಯಾಗುವ ಸಾಧ್ಯತೆಗಳಿವೆ. ಅಂದರೆ ಜೂನ್ ಮಧ್ಯ ಮತ್ತು ಅಂತ್ಯದ ನಡುವೆ ಕೊರೊನಾ ಪ್ರಕರಂಗಳು ಮತ್ತಷ್ಟು ಏರುವ ಸಂಭವಗಳಿವೆ ಎಂದು ಅವರು ತಿಳಿಸಿದರು.
ಸಿಂಗಾಪುರದಲ್ಲಿ (Singapore) COVID-19 ಅನ್ನು ಸ್ಥಳೀಯ ರೋಗವೆಂದು ಪರಿಗಣಿಸಲಾಗಿರುವುದರಿಂದ ಹಾಗೂ ಕಡ್ಡಾಯ ನಿಯಮಗಳನ್ನು ಜಾರಿಗೆ ತರುವುದು ಕೊನೆಯ ಉಪಾಯವಾಗಿದೆ. ಇದುವರೆಗೆ ಯಾವುದೇ ನಿರ್ಬಂಧಗಳನ್ನು ಹೇರುವ ಬಗ್ಗೆ ನಿರ್ಧರಿಸಿಲ್ಲ ಎಂದು ಆರೋಗ್ಯ ಸಚಿವರು ಹೇಳಿದರು.
ಕೋವಿಡ್‌ನೊಂದಿಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಈ ವಾರದಲ್ಲಿ ಕೋವಿಡ್‌ನಿಂದಾಗಿ ಸುಮಾರು 250 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರ 181 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕರಣಗಳು ದ್ವಿಗುಣಗೊಂಡರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತದೆ. ಇದು ದೇಶದ ಆರೋಗ್ಯ ಕ್ಷೇತ್ರಕ್ಕೆ ಹೊರೆಯಾಗಬಹುದು ಎಂದು ನುಡಿದರು.
60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು. ಕಳೆದ 12 ತಿಂಗಳುಗಳಲ್ಲಿ ಕೋವಿಡ್ ಲಸಿಕೆ ತೆಗೆದುಕೊಳ್ಳದಿರುವವರು ಸುರಕ್ಷತಾ ಕ್ರಮದ ಮೊರೆ ಹೋಗುವಂತೆ ಸಚಿವರು ಸೂಚನೆ ನೀಡಿದ್ದಾರೆ.