ಮೊಬೈಲ್ ನಂಬರ್ ಈಗ ಕೇವಲ ಕರೆ ಮಾಡಲು ಮಾತ್ರ ಬಳಕೆಯಾಗುತ್ತಿಲ್ಲ. ಬ್ಯಾಂಕ್ ಖಾತೆ, ಯುಪಿಐ, ವಾಟ್ಸಪ್, ಇ-ಮೇಲ್ ಸೇರಿದಂತೆ ಹಲವು ಸೇವೆಗಳಿಗೆ ಮೊಬೈಲ್ ನಂಬರ್ (SIM Swap Scam) ಸಂಪರ್ಕವಾಗಿರುತ್ತದೆ. ಹೀಗಾಗಿ ನಿಮ್ಮ ಸಿಮ್ ಮೇಲೆ ಬೇರೆಯವರು ನಿಯಂತ್ರಣ ಪಡೆದರೆ ಹಣಕಾಸಿನ ವಂಚನೆಗೂ ದಾರಿ ಆಗಬಹುದು. ಇಂತಹ ವಂಚನೆಗೆ ಸಿಮ್ ಸ್ವ್ಯಾಪ್ ಎಂದು ಕರೆಯಲಾಗುತ್ತದೆ.
ಸಿಮ್ ಸ್ವ್ಯಾಪ್ ಎಂದರೇನು?
ನಿಮ್ಮ ಮೊಬೈಲ್ ನಂಬರ್ ಇರುವ ಹಳೆಯ ಸಿಮ್ ಬದಲಿಗೆ ಅದೇ ನಂಬರ್‌ನ ಹೊಸ ಸಿಮ್ ಅನ್ನು ವಂಚಕರು ಪಡೆದುಕೊಳ್ಳುವ ವಿಧಾನವೇ ಸಿಮ್ ಸ್ವ್ಯಾಪ್. ಹೊಸ ಸಿಮ್ ಸಕ್ರಿಯವಾದ ನಂತರ ನಿಮ್ಮ ಹಳೆಯ ಸಿಮ್‌ಗೆ ನೆಟ್‌ವರ್ಕ್ ಇರುವುದಿಲ್ಲ. ಆದರೆ ನಿಮ್ಮ ನಂಬರ್‌ಗೆ ಬರುವ ಕರೆ, ಸಂದೇಶ ಮತ್ತು ಕೆಲವು ಒಟಿಪಿ ಸಂದೇಶಗಳು ವಂಚಕರ ಕೈಗೆ ಹೋಗುವ ಸಾಧ್ಯತೆ ಇರುತ್ತದೆ.
ವಂಚಕರಿಗೆ ನಿಮ್ಮ ಮಾಹಿತಿ ಹೇಗೆ ಸಿಗುತ್ತೆ?
ವಂಚಕರು ಮೊದಲು ನಿಮ್ಮ ಮೊಬೈಲ್ ನಂಬರ್, ಹೆಸರು, ವಿಳಾಸ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಾರೆ. ನಕಲಿ ಕರೆಗಳು, ನಕಲಿ ಗ್ರಾಹಕ ಸೇವಾ ಸಂದೇಶಗಳು, ಅನುಮಾನಾಸ್ಪದ ಲಿಂಕ್‌ಗಳು, ಸೋಷಿಯಲ್ ಮೀಡಿಯಾ ಅಥವಾ ಸೋರಿಕೆಯಾದ ಮಾಹಿತಿಯ ಮೂಲಕ ಈ ವಿವರಗಳು ಅವರ ಕೈಗೆ ಸಿಗಬಹುದು. ಈ ಮಾಹಿತಿಯನ್ನು ಬಳಸಿಕೊಂಡು ನಿಮ್ಮ ಹೆಸರಿನಲ್ಲಿ ನಕಲಿ ಸಿಮ್ ಪಡೆಯಲು ಪ್ರಯತ್ನಿಸಬಹುದು.

ಬ್ಯಾಂಕ್ ಖಾತೆಗೂ ಅಪಾಯ
ನಿಮ್ಮ ಮೊಬೈಲ್ ನಂಬರ್ ಬ್ಯಾಂಕ್ ಖಾತೆಗೆ ಸಂಪರ್ಕವಾಗಿದ್ದರೆ, ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಸಂದೇಶಗಳು ಮತ್ತು ಒಟಿಪಿ ನಿಮ್ಮ ನಂಬರ್‌ಗೆ ಬರುತ್ತವೆ. ಸಿಮ್ ವಂಚಕರ ಕೈಗೆ ಹೋದರೆ ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಲು ಅವರು ಪ್ರಯತ್ನಿಸಬಹುದು. ಆದರೆ ಸಿಮ್ ಕೈಗೆ ಸಿಕ್ಕ ತಕ್ಷಣ ಬ್ಯಾಂಕ್ ಖಾತೆ ಖಾಲಿಯಾಗುತ್ತದೆ ಎಂದಲ್ಲ. ಬ್ಯಾಂಕ್‌ಗಳು ಹಲವು ಭದ್ರತಾ ವ್ಯವಸ್ಥೆಗಳನ್ನು ಹೊಂದಿವೆ. ಆದರೂ ಸಿಮ್ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದು ಗಂಭೀರ ಎಚ್ಚರಿಕೆಯ ಸೂಚನೆಯಾಗಿದೆ.
ಹಠಾತ್ ‘ನೋ ಸರ್ವಿಸ್’ ತೋರಿಸಿದ್ರೆ ಎಚ್ಚರ
ಯಾವುದೇ ಕಾರಣವಿಲ್ಲದೆ ನಿಮ್ಮ ಮೊಬೈಲ್‌ನಲ್ಲಿ ನೆಟ್‌ವರ್ಕ್ ಹೋಗಿ ಕರೆ, ಸಂದೇಶಗಳು ಬರದೇ ಇದ್ದರೆ ಗಮನ ಕೊಡಿ. ಕೆಲವೊಮ್ಮೆ ಸಾಮಾನ್ಯ ನೆಟ್‌ವರ್ಕ್ ಸಮಸ್ಯೆಯೂ ಆಗಿರಬಹುದು. ಆದರೆ ನಿಮ್ಮ ಸಿಮ್ ಬದಲಾವಣೆಗಾಗಿ ಯಾರಾದರೂ ಮನವಿ ಮಾಡಿದ್ದಾರೆಯೇ ಎಂಬುದನ್ನು ತಕ್ಷಣ ಮೊಬೈಲ್ ಸೇವಾ ಸಂಸ್ಥೆಯಿಂದ ಪರಿಶೀಲಿಸಿಕೊಳ್ಳಿ.

ವಂಚನೆ ಪ್ರಕರಣ ಉದಾಹರಣೆ
ಕರ್ನಾಟಕದಲ್ಲಿ ನಡೆದ ಒಂದು ಪ್ರಕರಣದಲ್ಲಿ ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿದ್ದ ಮೊಬೈಲ್ ನಂಬರ್‌ಗೆ ಸಂಬಂಧಿಸಿದ ನಕಲಿ ಸಿಮ್ ಪಡೆಯಲಾಗಿತ್ತು. ನಂತರ ವಂಚಕರು ಬ್ಯಾಂಕ್ ಖಾತೆಯಿಂದ 87.70 ರೂ. ಲಕ್ಷಕ್ಕೂ ಹೆಚ್ಚು ಹಣ ವರ್ಗಾವಣೆ ಮಾಡಿದ್ದರು. ಈ ಪ್ರಕರಣದಲ್ಲಿ ಸಿಮ್ ನೀಡುವಾಗ ಸರಿಯಾದ ಪರಿಶೀಲನೆ ನಡೆದಿದೆಯೇ ಎಂಬ ಪ್ರಶ್ನೆಯೂ ಎದುರಾಯಿತು. ಬಳಿಕ ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ದೂರಸಂಪರ್ಕ ಸಂಸ್ಥೆಯ ಜವಾಬ್ದಾರಿಯ ಬಗ್ಗೆಯೂ ಮಹತ್ವದ ವಿಚಾರಗಳನ್ನು ಗಮನಿಸಿದೆ.
ಮುಂಬೈನಲ್ಲಿ ವಯಸ್ಸಾದ ಮಹಿಳೆ ಮತ್ತು ಅವರ ಸೊಸೆ ಸಿಮ್ ಬದಲಾವಣೆ ಸಂಬಂಧಿತ ಸೈಬರ್ ವಂಚನೆಗೆ ಒಳಗಾಗಿ 18.79 ರೂ. ಲಕ್ಷ ಕಳೆದುಕೊಂಡಿದ್ದರು. ಪ್ರಕರಣದ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಬ್ಯಾಂಕ್‌ಗೆ ಹಣವನ್ನು ಹಿಂದಿರುಗಿಸುವಂತೆ ನಿರ್ದೇಶನ ನೀಡಿತ್ತು.
ಇಂತಹ ಪ್ರಕರಣಗಳು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತವೆ. ಮೊಬೈಲ್ ನಂಬರ್ ಕಳೆದುಕೊಳ್ಳುವುದು ಎಂದರೆ ಕೇವಲ ಕರೆ ಮಾಡುವ ಸೌಲಭ್ಯ ಕಳೆದುಕೊಳ್ಳುವುದಲ್ಲ. ಅದರೊಂದಿಗೆ ಸಂಪರ್ಕವಾಗಿರುವ ಹಲವು ಡಿಜಿಟಲ್ ಸೇವೆಗಳ ಮೇಲೂ ಅಪಾಯ ಉಂಟಾಗಬಹುದು.
ಸಿಮ್ ಮಾರಾಟದಲ್ಲೂ ಈಗ ಕಟ್ಟುನಿಟ್ಟಿನ ನಿಯಮ
ಸಿಮ್‌ಗಳನ್ನು ಬೇಕಾಬಿಟ್ಟಿಯಾಗಿ ಮಾರಾಟ ಮಾಡುವುದನ್ನು ತಡೆಯಲು ದೂರಸಂಪರ್ಕ ಇಲಾಖೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಪರ್ಕಗಳಿವೆ ಎಂಬುದನ್ನೂ ಪರಿಶೀಲಿಸುವ ವ್ಯವಸ್ಥೆ ಇದೆ.
ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9ಕ್ಕಿಂತ ಹೆಚ್ಚು ಮೊಬೈಲ್ ಸಂಪರ್ಕಗಳು ಇದ್ದರೆ ಹೆಚ್ಚುವರಿ ಸಂಪರ್ಕಗಳ ಬಗ್ಗೆ ಪರಿಶೀಲನೆ ನಡೆಯುತ್ತದೆ. ನಕಲಿ ದಾಖಲೆಗಳ ಮೂಲಕ ಸಿಮ್ ಪಡೆದು ಸೈಬರ್ ವಂಚನೆ ನಡೆಸುವುದನ್ನು ತಡೆಯುವುದು ಇದರ ಪ್ರಮುಖ ಉದ್ದೇಶ.

ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳಿವೆ ಗೊತ್ತಾ?
ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಪರ್ಕಗಳಿವೆ ಎಂಬುದನ್ನು ಸರ್ಕಾರದ ಸಂಚಾರ್ ಸಾಥಿ ವ್ಯವಸ್ಥೆಯ ಮೂಲಕ ಪರಿಶೀಲಿಸಬಹುದು. ನಿಮಗೆ ಗೊತ್ತಿಲ್ಲದ ಮೊಬೈಲ್ ನಂಬರ್ ನಿಮ್ಮ ಹೆಸರಿನಲ್ಲಿ ಕಂಡುಬಂದರೆ ಅದನ್ನು ವರದಿ ಮಾಡುವ ಅವಕಾಶವೂ ಇದೆ.
ಇದು ಪ್ರತಿಯೊಬ್ಬರೂ ಒಮ್ಮೆ ಪರಿಶೀಲಿಸಬೇಕಾದ ವಿಷಯ. ನೀವು ಬಳಸದೇ ಇರುವ ಸಿಮ್ ನಿಮ್ಮ ಹೆಸರಿನಲ್ಲಿ ಇದ್ದರೆ, ಅದನ್ನು ಹಾಗೆಯೇ ಬಿಟ್ಟುಬಿಡುವುದು ಕೂಡ ಅಪಾಯಕ್ಕೆ ಕಾರಣವಾಗಬಹುದು.
ಸಿಮ್ ಸ್ವ್ಯಾಪ್ ವಂಚನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ?
ಅಪರಿಚಿತ ವ್ಯಕ್ತಿಗಳಿಗೆ ಒಟಿಪಿ, ಬ್ಯಾಂಕ್ ಮಾಹಿತಿ, ಗುರುತಿನ ದಾಖಲೆಗಳ ವಿವರಗಳನ್ನು ನೀಡಬೇಡಿ. ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯಬೇಡಿ. ನಿಮ್ಮ ಸಿಮ್ ಇದ್ದಕ್ಕಿದ್ದಂತೆ ಕೆಲಸ ಮಾಡದೇ ಹೋದರೆ ತಕ್ಷಣ ಮೊಬೈಲ್ ಸೇವಾ ಸಂಸ್ಥೆಯನ್ನು ಸಂಪರ್ಕಿಸಿ.
ಅದೇ ಸಮಯದಲ್ಲಿ ಬ್ಯಾಂಕ್ ಖಾತೆಯಲ್ಲಿನ ವ್ಯವಹಾರಗಳನ್ನೂ ಪರಿಶೀಲಿಸಿ. ಅನುಮಾನಾಸ್ಪದ ಹಣ ವರ್ಗಾವಣೆ ಕಂಡುಬಂದರೆ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ.
ನಿಮ್ಮ ಸಿಮ್ ನಿಮ್ಮ ಕೈಯಲ್ಲಿದೆ ಅಂದ ಮಾತ್ರಕ್ಕೆ ಅದು ಸುರಕ್ಷಿತ ಅಂತಲ್ಲ. ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಸಿಮ್ ಬಳಸುತ್ತಿದ್ದಾರೆಯೇ ಎಂಬುದನ್ನೂ ಪರಿಶೀಲಿಸಬೇಕು. ಒಂದು ಮೊಬೈಲ್ ನಂಬರ್ ಇಂದು ನಮ್ಮ ಹಣಕಾಸಿನ ಜೀವನದ ಪ್ರಮುಖ ಕೀಲಿಯಾಗಿದೆ. ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.
