ಬೆಂಗಳೂರು: ಭಾರತೀಯ ನವೋದ್ಯಮಗಳು ಪ್ರಸ್ತುತ ಜಾಗತಿಕ ಸವಾಲುಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿವೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ (C.P. Radhakrishnan) ಹೇಳಿದರು.
ನಗರದ ಐಟಿ ಪಾಕ್೯ ರಸ್ತೆಯಲ್ಲಿರುವ ಪ್ರತಿಷ್ಠಿತ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯವು (CMR Technical College) 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಇಂದು ಸಿಎಂಆರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಬೆಳ್ಳಿ ಮಹೋತ್ಸವ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ ಭಾರತೀಯ ನವೋದ್ಯಮಗಳು ಪ್ರಸ್ತುತ ಜಾಗತಿಕ ಸವಾಲುಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿವೆ. ಕಾಲೇಜುಗಳು ಕೇವಲ ಕಲಿಕಾ ಕೇಂದ್ರಗಳಲ್ಲ, ಅವು ನಾವೀನ್ಯತೆಗಳ ಪ್ರಯೋಗಾಲಯಗಳಾಗಬೇಕು. ವಿದ್ಯಾರ್ಥಿಗಳಲ್ಲಿ ರೂಪುಗೊಳ್ಳುವ ಜವಾಬ್ದಾರಿಯುತ ನಾಯಕತ್ವ ಅವರ ಯಶಸ್ಸಿನ ಗುಟ್ಟು ಎಂದು ಹೇಳಿದರು.
ಹವಾಮಾನ ಬದಲಾವಣೆ ಮತ್ತು ಎಐ ನೈತಿಕ ಬಳಕೆಯಂತಹ ಸವಾಲುಗಳನ್ನು ಎದುರಿಸುವಲ್ಲಿ ಭಾರತೀಯ ಸ್ಟಾರ್ಟ್‌ಅಪ್‌ಗಳು ಜಾಗತಿಕ ನಾಯಕರಾಗಿ ಹೊರಹೊಮ್ಮಲಿವೆ. 2047ರ ವೇಳೆಗೆ ಭಾರತವು ‘ವಿಕಸಿತ ಭಾರತವಾಗುವ ಗುರಿ ಹೊಂದಿದೆ. ಭಾರತದ ಯುವಶಕ್ತಿಯು ಈ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ,” ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಸಿಎಂಆರ್ ಐಟಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸುಸಜ್ಜಿತ ಇನ್‌ಕ್ಯುಬೇಷನ್ ಸೆಂಟರ್ ಮತ್ತು ಸಿಲ್ವರ್ ಜುಬಿಲಿ ಆಡಿಟೋರಿಯಂ ಅನ್ನು ಲೋಕಾರ್ಪಣೆ ಮಾಡಿದರು.
ಸಿಎಂಆರ್‌ಐಟಿಯ 25 ವರ್ಷಗಳ ಸುಧೀರ್ಘ ಪಯಣವನ್ನು ಸ್ಮರಣಿಸುವ “ವೊವೆನ್ ಇನ್ ಸಿಲ್ವರ್ 25 ಇಯರ್ಸ್ ನರ್ಚರಿಂಗ್ ಮೈಂಡ್ಸ್’ ವಿಶೇಷ ಪುಸ್ತಕವನ್ನು ಬಿಡುಗಡೆ ಮಾಡಿದರು.
ಗೌರವ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ಶ್ಲಾಘಿಸಿದರು. ಬೆಂಗಳೂರು ಕೇವಲ ಐಟಿ ಕೇಂದ್ರವಲ್ಲ, ಅದು ನವೋದ್ಯಮಗಳ ರಾಜಧಾನಿ. ಇಂದಿನ ಜಗತ್ತನ್ನು ಕೃತಕ ಬುದ್ಧಿಮತ್ತೆ (AI), ಡೇಟಾ ಸೈನ್ಸ್ ಮತ್ತು ರೊಬೊಟಿಕ್ಸ್ ಪರಿವರ್ತಿಸುತ್ತಿವೆ,” ಎಂದು ಅವರು ಅಭಿಪ್ರಾಯಪಟ್ಟರು.
ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಮತ್ತು ಸಿಎಂಆರ್ ವಿಶ್ವವಿದ್ಯಾಲಯದ ಅಧ್ಯಕ್ಷರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಡಾ.ಕೆ.ಸಿ.ರಾಮಮೂರ್ತಿ ಅವರು ಮಾತನಾಡುತ್ತಾ, “ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದ 25 ವರ್ಷಗಳ ಗುಣಮಟ್ಟದ ಶೈಕ್ಷಣಿಕ ಸೇವೆಯ ಪಯಣವು ನಮಗೆ ಸಾರ್ಥಕತೆಯ ಹೆಮ್ಮೆ ತಂದಿದೆ. ರಾಷ್ಟ್ರೀಯ ಶಿಕ್ಷಣ ಪರಿಸರ ವ್ಯವಸ್ಥೆಗೆ ಪೂರಕವಾದ ಗುಣಮಟ್ಟದ ಶಿಕ್ಷಣ ನೀಡಲು ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳು ಬದ್ಧವಾಗಿವೆ. ಸಿಎಂಆರ್ ಐಟಿಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಯಶಸ್ವಿ ನವೋದ್ಯಮಿಗಳಾಗಿ ಬೆಳೆದು ಸಾಧನೆ ಮಾಡಿದ್ದಾರೆ ಇದು ನಮ್ಮ ಸಂಸ್ಥೆಯ ಹಿರಿಮೆ ಎಂದು ಹರ್ಷವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿಎಂಆರ್ ಐಟಿಯಲ್ಲಿ ವ್ಯಾಸಂಗ ಮಾಡಿ ದೇಶ-ವಿದೇಶಗಳಲ್ಲಿ ನವೋದ್ಯಮಿಗಳಾಗಿ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿಎಂಆರ್ ಜ್ಞಾನಧಾರ ಟ್ರಸ್ಟ್ ಅಧ್ಯಕ್ಷರು, ಸಿಎಂಆರ್ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ಸಬಿತಾ ರಾಮಮೂರ್ತಿ ಅವರು ಕಾರ್ಯಕ್ರಮದಲ್ಲಿ ” ಮಾದಕ ದ್ರವ್ಯ ವ್ಯಸನ ಸೇವನೆ ತ್ಯಜಿಸುವ ಜಾಗೃತಿ ಅಭಿಯಾನ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಎನ್‌ಪಿಎಸ್ ಸಮೂಹ ಸಂಸ್ಥೆಗಳು, ಎನ್‌ಎಎಫ್‌ಎಲ್ ಮತ್ತು ಟಿಐಎಸ್‌ಬಿ ಅಧ್ಯಕ್ಷರಾದ ಡಾ. ಕೆ. ಪಿ. ಗೋಪಾಲಕೃಷ್ಣ, ಸಿಎಂಆರ್ ಜ್ಞಾನಧಾರ ಟ್ರಸ್ಟ್ ಕಾರ್ಯದರ್ಶಿ ಕೆ. ಸಿ. ಜಗನ್ನಾಥ್ ರೆಡ್ಡಿ, ಸಿಇಒ ಹಾಗೂ ಸಹಕುಲಪತಿ ಶ್ರೀ ಜಯದೀಪ್ ಕೆ. ಆರ್. ರೆಡ್ಡಿ, ಏಕ್ಯಾ ಸಮೂಹ ಶಾಲೆಗಳ ಸಂಸ್ಥಾಪಕಿ ಡಾ. ತ್ರಿಸ್ತಾ ರಾಮಮೂರ್ತಿ, ಪ್ರಾಂಶುಪಾಲರಾದ ಡಾ. ಸಂಜಯ್ ಜೈನ್ ಹಾಗೂ ಉಪ ಪ್ರಾಂಶುಪಾಲರಾದ ಡಾ. ಬಿ. ನರಸಿಂಹ ಮೂರ್ತಿ, ಅಕಾಡೆಮಿಕ್ ಡೀನ್ ಗಳು, ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರುಗಳು, ಹಳೆಯ ವಿದ್ಯಾರ್ಥಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.







