ರಾಮನಗರ: ನಮ್ಮಪ್ಪನ ಆಣೆ ಡಿಸೆಂಬರ್‌ವರೆಗೆ ಮಾತ್ರ ಸಿದ್ದರಾಮಯ್ಯ (Siddaramaiah) ಸಿಎಂ ಆಗಿರುತ್ತಾರೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ (V Somanna) ಭವಿಷ್ಯ ನುಡಿದಿದ್ದಾರೆ.
ಚನ್ನಪಟ್ಟಣದ (Channapatna) ಹೊಟ್ಟಿಗನ ಹೊಸಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಕೇಂದ್ರದ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ನೀವೆ ಹೊಣೆ ಅಂತ ಹೇಳಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಈ ಕಾರಣಕ್ಕೆ ನಾವು ದೇಶದ ಎಲ್ಲಾ ಚುನಾವಣೆ ಗೆಲ್ಲುತ್ತೇವೆ. ಸಿದ್ದರಾಮಯ್ಯ ಅವರಿಗೆ ಶತ್ರುಗಳು ಅಂತಾ ಇದ್ದರೆ ಅದು ಕಾಂಗ್ರೆಸ್‌ನಲ್ಲೇ ಎಂದು ಕಿಡಿಕಾರಿದರು. ಇದನ್ನೂ ಓದಿ: ನರೇಂದ್ರ ಮೋದಿ ಸುಳ್ಳಿನ ಸರದಾರ – ಮಲ್ಲಿಕಾರ್ಜುನ ಖರ್ಗೆ ತೀವ್ರ ತರಾಟೆ
ಬಿಎಸ್ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರೇ ಈ ಪಾಪದ ಕೆಲಸ ಮಾಡಬೇಡಿ. ಕೋವಿಡ್‌ನಲ್ಲಿ ನಾವೆಲ್ಲಾ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಯಾವ ರೀತಿ ಕೆಲಸ ಮಾಡಿದ್ದೇವೆ ಎಂದು ಜಾರ್ಜ್ ಹಾಗೂ ಬೈರತಿ ಸುರೇಶ್‌ರನ್ನು ಕೇಳಿ. ನೀವು ಸಾವಿರಾರು ಕೋಟಿ ಹಗರಣ ಅಂತಾ ಹೇಳಿದ್ದೀರಿ. ಈಗ 14 ಕೋಟಿ ಅಂತಿದ್ದೀರಾ. ನಿಮ್ಮ 14 ಸೈಟ್ ಬಗ್ಗೆ ನೋಡಿ. ಈ ಬಗ್ಗೆ ನಿರ್ಣಯ ಕೈಗೊಳ್ಳುವಷ್ಟರಲ್ಲಿ ನಿಮ್ಮ ಸಚಿವ ಸಂಪುಟವೇ ಇರುವುದಿಲ್ಲ. ಸಿದ್ದರಾಮಯ್ಯ ತಮ್ಮ ತಪ್ಪು ಮುಚ್ಚಿಕೊಳ್ಳಲು ಡೈವರ್ಟ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಹೈಕೋರ್ಟ್ ತೀರ್ಪನ್ನು ಪೊಲಿಟಿಕಲ್ ಜಡ್ಜ್‌ಮೆಂಟ್ ಎಂದಿದ್ದ ಸಚಿವರಿಗೆ ಸಂಕಷ್ಟ – ಜಮೀರ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಸೂಚನೆ
ಚನ್ನಪಟ್ಟಣ ಚುನಾವಣೆ ವಿಚಾರವಾಗಿ ಮಾತನಾಡಿ, ಚನ್ನಪಟ್ಟಣ ಜನ ಕೃತಜ್ಞತೆಗೆ ಮತ್ತೊಂದು ಹೆಸರು. ಭಗೀರಥ ಯಾರು ಅದು ಇದು ಅಂತಾ ನಾನು ಹೇಳಲ್ಲ. ಜನ ದೇವೇಗೌಡರನ್ನು ನೆನಪು ಮಾಡಿಕೊಳ್ಳುತ್ತಾರೆ. ದೇವೇಗೌಡರ ದೂರದೃಷ್ಟಿ ಕಾರಣದಿಂದ ಹದಿನಾಲ್ಕು ಕ್ಷೇತ್ರಗಳನ್ನು ಗೆದ್ದಿದ್ದೇವೆ. ಇನ್ನೆರಡು ದಿನಗಳಲ್ಲಿ ಇಲ್ಲಿ ಚಿತ್ರಣ ಬದಲಾಗಲಿದೆ. ಜೆಡಿಎಸ್ ಭದ್ರಕೋಟೆ ಚನ್ನಪಟ್ಟಣ. ಜನ ಪದೇಪದೇ ಯೋಗೇಶ್ವರ್ ಯಾಮಾರಿಸಲು ಆಗಲ್ಲ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದ್ದೀರಾ ಅನ್ನೋ ಸಂದೇಶ ಜನ ನೀಡುತ್ತಾರೆ. ನಾಲ್ಕು ವರ್ಷ ಸುಮ್ಮನೆ ಕೂರುವಂತೆ ಮಾಡುತ್ತಾರೆ. ನಿಖಿಲ್ ಕುಮಾರಸ್ವಾಮಿ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ. ಈ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಕೊಡಬೇಕು ಎಂದು ಜನ ಅರಿತಿದ್ದಾರೆ. ಆ ಕೆಲಸವನ್ನು ಚನ್ನಪಟ್ಟಣದ ಜನ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭಾರತೀಯ ಜನತಾ ಪಾರ್ಟಿ ಅಲ್ಲಾ, ಭಾರತೀಯ ಜೂಟಾ ಪಾರ್ಟಿ: ಸಚಿವ ಖಂಡ್ರೆ