ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕರ್ತರನ್ನು ಹುರಿದುಂಬಿಸುವ ದೃಷ್ಟಿಯಿಂದ ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆಂಬ ಹೇಳಿಕೆ ನೀಡಿದ್ದಾರೆಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು 5 ವರ್ಷಗಳ ಕಾಲ ಸುಭದ್ರವಾಗಿರುತ್ತದೆ. ಯಾರ ಕಾಲನ್ನು ಎಳೆಯುವ ಅವಶ್ಯಕತೆ ನಮಗಿಲ್ಲ. ಸಿದ್ದರಾಮಯ್ಯನವರು ಮೇಧಾವಿ ನಾಯಕರಾಗಿದ್ದಾರೆ. ಅವರು ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಅವರು ಕಾರ್ಯಕರ್ತರನ್ನು ಹುರಿದುಂಬಿಸುವ ದೃಷ್ಟಿಯಿಂದ ಆ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.
Advertisement
Advertisement
ಅಲ್ಲದೇ ರಾಜಕಾರಣಿಗಳಿಗೆ ಆಸೆ, ಕನಸುಗಳು ಇರಬೇಕಾಗುತ್ತದೆ ಅದು ಸಹಜ, ಆದರೆ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾರೆ. ನಾವು ಸಹ ಸಿದ್ದರಾಮಯ್ಯನವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ನೋಡಬೇಕೆಂದು ಅಂದುಕೊಂಡೇ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವು. ಆದರೆ ಜನರ ತೀರ್ಪಿಗೆ ತಲೆಬಾಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ನಾನು ಮತ್ತೆ ಮುಖ್ಯಮಂತ್ರಿ ಆಗ್ತೀನಿ-ಸಿದ್ದರಾಮಯ್ಯ
Advertisement
ಲೇವಾದೇವಿ ಬಗ್ಗೆ ಸುಗ್ರೀವಾಜ್ಞೆ ಕುರಿತು ಪ್ರತಿಕ್ರಿಯಿಸಿ, ಖಾಸಗಿ ಲೇವಾದೇವಿ ವ್ಯವಹಾರಗಳಲ್ಲಿ ನಾವು ಬಹಳ ಜನ ರೈತರನ್ನು ರಕ್ಷಣೆ ಮಾಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಮೈತ್ರಿ ಸರ್ಕಾರ ಈ ನಿರ್ಧಾರಕ್ಕೆ ಕೈ ಹಾಕಿದೆ. ಲೇವಾದೇವಿ ಸುಗ್ರೀವಾಜ್ಞೆ ಕುರಿತು ಚರ್ಚೆಯ ಬಳಿಕವೇ ನಿರ್ಧಾರ ಕೈಗೊಂಡಿದ್ದೇವೆ. ಇದಕ್ಕೆ ಸರ್ಕಾರ ಹಾಗೂ ಸಚಿವರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಂಪೂರ್ಣ ತೀರ್ಮಾನದ ನಂತರ ಕೇಂದ್ರ ಸರ್ಕಾರಕ್ಕೆ ಸದನದ ನಿರ್ಧಾರವನ್ನು ಕಳುಹಿಸಿಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ರೈತರ ಖಾಸಗಿ ಸಾಲವೂ ಮನ್ನಾ- ಯಾರದ್ದು ಆಗುತ್ತೆ? ಯಾರದ್ದು ಆಗಲ್ಲ?
Advertisement
ರಾಷ್ಟ್ರೀಕೃತ ಬ್ಯಾಂಕುಗಳು ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ವ್ಯಾಪಾರಿಗಳ ಸಾಲವನ್ನು ಒಂದೇ ದಿನದಲ್ಲಿ ಮನ್ನಾ ಮಾಡುತ್ತಾರೆ. ಆದರೆ ರೈತರ ಸಾಲವನ್ನು ಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲವನ್ನು ಕೂಡಲೇ ಏಕಮುಖದಲ್ಲಿ ಮನ್ನಾ ಮಾಡಿ, ಆ ಹಣವನ್ನು ನಾಲ್ಕು ವರ್ಷಗಳಲ್ಲಿ ನಮ್ಮ ಸರ್ಕಾರ ತೀರಿಸುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ, ಅವರು ಪ್ರವಾಸ ಕೈಗೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಈಗಾಗಲೇ ಅವರುಗಳು ನೆರೆ ಪೀಡಿತ ಭಾಗಗಳಲ್ಲಿ ಪರೀಕ್ಷಿಸಿ ಏನೆಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತೋ ಅದನ್ನೇಲ್ಲಾ ಮಾಡಿದ್ದಾರೆ. ಅವರು ಹೋಗುತ್ತಿರುವುದು ಅಕ್ಕ ಸಮ್ಮೇಳನಕ್ಕೆ, ನನಗೂ ಸಹ ಆಹ್ವಾನ ಬಂದಿತ್ತು, ಆದರೆ ಕಾರಣಾಂತರಗಳಿಂದ ತೆರಳಲು ಸಾಧ್ಯವಾಗಿಲ್ಲ. ಈ ಮೊದಲು ಎಷ್ಟೋ ಸಿಎಂಗಳು ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡಿಲ್ಲವೇ ಎಂದು ಪ್ರಶ್ನಿಸಿದರು.
ಈ ವೇಳೆ ಕೊಡಗು ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‍ರವರನ್ನು ಕೊಂಡಾಡಿದ ಅವರು, ಸಚಿವರು ತುಂಬಾ ಅದ್ಭುತ ರೀತಿಯಲ್ಲಿ ಪರಿಸ್ಥಿತಿಯನ್ನು ನಿರ್ವಹಣೆ ಮಾಡಿದ್ದಾರೆ, ಅಲ್ಲೇ ಉಳಿದು ಗಟ್ಟಿಯಾಗಿ ನಿಂತು ಕೆಲಸ ಕಾರ್ಯಗಳನ್ನು ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv