Connect with us

Dakshina Kannada

ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದ ಸಾವರ್ಕರ್‌ಗೆ ಬಿಜೆಪಿಯಿಂದ ಭಾರತ ರತ್ನ: ಸಿದ್ದರಾಮಯ್ಯ ಕಿಡಿ

Published

on

– ನಳಿನ್‌ಕುಮಾರ್‌ಗೆ ರಾಜ್ಯದ ಜ್ಞಾನ ಇಲ್ಲ
– ಬಿಎಸ್‍ವೈ ಒಲ್ಲದ ಶಿಶು

ಮಂಗಳೂರು: ಗಾಂಧೀಜಿ ಹತ್ಯೆಗೆ ಸ್ಕೆಚ್ ಹಾಕಿದ್ದ ಸಾವರ್ಕರ್ ಗೆ ಬಿಜೆಪಿ ಭಾರತ ರತ್ನ ನೀಡಲು ಮುಂದಾಗುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಗೋಡ್ಸೆಯ ಹಿಂದೆ ನಿಂತು ಹತ್ಯೆಗೆ ಸಂಚು ರೂಪಿಸಿದ್ದರು. ಸೂಕ್ತ ಸಾಕ್ಷ್ಯ ಇಲ್ಲದೆ ಆರೋಪಿಯಾಗಿ ಗುರುತಿಸಿರಲಿಲ್ಲ ಅಷ್ಟೇ. ಆದರೆ ಅಂಥ ವ್ಯಕ್ತಿಗೆ ಭಾರತ ರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತ ರತ್ನ ನೀಡಲಿ ಎಂದು ಟೀಕಿಸಿದರು.

ರಾಜ್ಯ ಬಿಜೆಪಿ ಸರ್ಕಾರಕ್ಕೆ ಯಾರು ಹೇಳುವವರು, ಕೇಳುವವರು ಇಲ್ಲ. ಕೇವಲ ವರ್ಗಾವಣೆ ದಂಧೆ ನಡೆಸುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯವನ್ನು ಸರ್ಕಾರದಲ್ಲಿ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು. ಇದನ್ನು ಓದಿ: ಕಾಂಗ್ರೆಸ್ ಸಾವರ್ಕರ್‌ಗೆ ಭಾರತರತ್ನ ನೀಡದೆ ಅವಮಾನಿಸಿದೆ – ಮೋದಿ

ರಾಜ್ಯ ಸರ್ಕಾರ ಡಿಸೆಂಬರ್ ವರೆಗೂ ಸರ್ಕಾರ ಉಳಿಯುವುದು ಹೆಚ್ಚು. ಆ ಬಳಿಕ ಚುನಾವಣೆ ಬರುವುದು ಪಕ್ಕಾ. ಸಿಎಂ ಬಿಎಸ್ ವೈ ಅವರು ಒಲ್ಲದ ಶಿಶು ಅಷ್ಟೇ. ಅವರನ್ನ ಸಿಎಂ ಮಾಡುವುದಕ್ಕೆ ಕೇಂದ್ರ ಬಿಜೆಪಿಗೆ ಇಷ್ಟ ಇರಲಿಲ್ಲ. ಅನಿವಾರ್ಯ ಕಾರಣದಿಂದ ಮುಖ್ಯಮಂತ್ರಿಗಳಾಗಿ ಮಾಡಿದೆ ಅಷ್ಟೇ. ಬಿಎಸ್‍ವೈ ಅವರು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಒಲ್ಲದ ಶಿಶು ಎಂದರು.

ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಹೋಗಿದೆ. ಹಸಿವಿನ ರೇಟಿಂಗ್‍ನಲ್ಲಿ ಭಾರತ 102ನೇ ಸ್ಥಾನಕ್ಕೆ ಮುಟ್ಟಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಪಟ್ಟಿಯಲ್ಲಿ ನಮ್ಮಿಂದ ಮುಂದಿದೆ. ಕಳೆದ ಐದು ವರ್ಷದಲ್ಲಿ ಮೋದಿ ಮಾಡಿದ ಸಾಧನೆ ಇದು ಮಾತ್ರ. ಆದರೆ ಅಮೆರಿಕಕ್ಕೆ ಹೋಗಿ ಭಾರತದಲ್ಲಿ ಎಲ್ಲರೂ ಸುಖವಾಗಿದ್ದಾರೆ ಎಂದು ಹೇಳುತ್ತಾರೆ.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಳಿನ್ ಕುಮಾರ್ ಅವರಿಗೆ ರಾಜ್ಯದಲ್ಲಿ ಜಿಲ್ಲೆಗಳೆಷ್ಟಿವೆ ಎಂದೇ ಗೊತ್ತಿಲ್ಲ. ಅವರಿಗೆ ಮಂಗಳೂರು ಮಾತ್ರ ಗೊತ್ತು. ಅವರ ಜ್ಞಾನ ಇರೋದು ಅಷ್ಟೇ. ಈ ಪುಣ್ಯಾತ್ಮ ರಾಜ್ಯದಲ್ಲಿ ಎಷ್ಟು ತಾಲೂಕುಗಳಿವೆ ಎಂದು ಹೇಳಲಿ ನೋಡೋಣ ಎಂದು ಲೇವಡಿ ಮಾಡಿದರು. ಇದನ್ನು ಓದಿ: ಪಕ್ಷ ಸಂಘಟನೆಗೆ ಬಿಜೆಪಿ ರಾಜ್ಯವನ್ನು 36 ಜಿಲ್ಲೆಗಳನ್ನಾಗಿ ಮಾಡಿದೆ – ಕಟೀಲ್

ಉಪಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ಅಪರೇಷನ್ ಕಮಲ ನಡೆಸುವ ಕುರಿತು ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿಗೆ ಆಪರೇಷನ್ ಮಾಡೋದಷ್ಟೇ ಕೆಲಸ. ನಮ್ಮವರನ್ನು ಹಣ ಕೊಟ್ಟು ಖರೀದಿಸುತ್ತಾರೆ. ಆದರೆ ಬಿಜೆಪಿಗೆ ಆಪರೇಷನ್ ಮಾಡೋಕೆ ಹಣ ಎಲ್ಲಿಂದ ಬರುತ್ತೆ? ಭ್ರಷ್ಟಾಚಾರ ಹಣದಲ್ಲಿ ಆಪರೇಷನ್ ಮಾಡುತ್ತಾರೆ. ದೇಶದಲ್ಲಿ ಬೇರೆ ಪಕ್ಷದವರನ್ನು ಖರೀದಿಸುವುದು ಬಿಜೆಪಿ ಕೆಲಸವಾಗಿದೆ. ಇಲ್ಲ ಅಂದರೆ ಐಟಿ, ಇಡಿ ಬಳಸಿ ಹೆದರಿಸುತ್ತಾರೆ. ಈ ಮೂಲಕ ದೇಶ ಆಳ್ವಿಕೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಕಿಡಿಕಾರಿದರು.

ಮಹಾರಾಷ್ಟ್ರ ಚುನಾವಣೆಗಾಗಿ ಸಿಎಂ ಬಿಎಸ್‍ವೈ ನೀರು ಬಿಡುತ್ತೇವೆ ಎಂದು ಹೇಳಿದ್ದಾರೆ. ಮತಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಎರಡು ರಾಜ್ಯಗಳ ನಡುವೆ ಮಾತುಕತೆಯಾಗಿದೆ. ಇನ್ನು ಮಹಾರಾಷ್ಟ್ರಕ್ಕೆ ನೀರು ಕೊಡುವುದನ್ನು ನಿಲ್ಲಿಸಲು ಆಗಲ್ಲ ಎಂದರು.

Click to comment

Leave a Reply

Your email address will not be published. Required fields are marked *