ಬೆಂಗಳೂರು: ಕಾಂಗ್ರೆಸ್‍ನಲ್ಲಿ (Congress) ಮೊದಲೇ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಂಸ್ಕೃತಿ ಇಲ್ಲ ಎಂದು ಸಚಿವ ವಿ. ಸೋಮಣ್ಣಗೆ (V Somanna) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು.
ಕಾಂಗ್ರೆಸ್‍ನವರು ಲಿಂಗಾಯತ ಸಿಎಂ ಅಂತ ಘೋಷಣೆ ಮಾಡಲಿ ಎಂಬ ಸಚಿವ ಸೋಮಣ್ಣ ಸವಾಲ್‌ಗೆ ಪ್ರತಿಕ್ರಿಯಿಸಿದ ಅವರು, ಯಾವ ಸೋಮಣ್ಣ? ಸವಾಲ್ ಎಂದರೇನು? ಕಾಂಗ್ರೆಸ್‍ನಲ್ಲಿ ಮೊದಲೇ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಂಸ್ಕೃತಿ ಇಲ್ಲ. ಹೊಸದಾಗಿ ಆಯ್ಕೆ ಆದ ಶಾಸಕರು ಹಾಗೂ ಹೈಕಮಾಂಡ್ ಸಿಎಂ ಬಗ್ಗೆ ತೀರ್ಮಾನ ಮಾಡುತ್ತಾರೆ. ಇದು ಕಾಂಗ್ರೆಸ್‍ನ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ ಎಂದು ಹೇಳಿದರು.
ಲಿಂಗಾಯತ ಸಿಎಂ ವಿಚಾರವಾಗಿ ಬಿಜೆಪಿ (BJP) ಲಿಂಗಾಯತ ನಾಯಕರ ಸಭೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಅದು ಬಿಜೆಪಿ ಆಂತರಿಕ ವಿಚಾರವಾಗಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಆಂತರಿಕ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದ ಅವರು, ಹೆಚ್. ವಿಶ್ವನಾಥ್ ಪಕ್ಷ ಸೇರ್ಪಡೆ ಆಗಿಲ್ಲ. ಯಾರು ಹೇಳಿದ್ದು ಅವರು ಸೇರ್ಪಡೆ ಆಗಿದ್ದಾರೆ. ಅವರು ಬೆಂಬಲ ಕೊಟ್ಟಿದ್ದಾರೆ ಅಷ್ಟೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: 50 ವರ್ಷಗಳಿಂದ ಕಾಂಗ್ರೆಸ್ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿಲ್ಲ: ಬೊಮ್ಮಾಯಿ
ಸೂರತ್ ಕೋರ್ಟ್‍ನಲ್ಲಿ ರಾಹುಲ್ ಗಾಂಧಿ ಅರ್ಜಿ ವಜಾ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಳಹಂತದ ಕೋರ್ಟ್‍ನಲ್ಲಿ ಆದೇಶ ಆಗಿದೆ. ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಬಹುದು ಎಂದ ಅವರು, ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಬಗ್ಗೆ ಗೊತ್ತಿಲ್ಲ. ಪಕ್ಷದ ಹೈಕಮಾಂಡ್, ಅಧ್ಯಕ್ಷರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಲಿಂಗಾಯತರನ್ನು ಸಿಎಂ ಮಾಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ : ಸೋಮಣ್ಣ ಸವಾಲು