– ಜು.14ರಂದು ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ
ಬೆಂಗಳೂರು: ನಮ್ಮ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ 60 ಟಿಎಂಸಿ ನೀರು ಮಾತ್ರ ಇದೆ. ನಮಗೆ ಕುಡಿಯಲು, ಬೇಸಾಯಕ್ಕೆ ನೀರಿನ ಅಗತ್ಯವಿದೆ. ಹೀಗಾಗಿ ಜುಲೈ ವರೆಗೂ ನೀರು (Cauvery Water) ಕೊಡಲು ಸಾಧ್ಯವಿಲ್ಲ ಅಂತ ಹೇಳಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ಎಲ್ಲಾ 4 ಜಲಾಶಯಗಳಲ್ಲಿ ಒಟ್ಟು ಕೇವಲ 60 ಟಿಎಂಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನಾವು ನೀರು ಒದಗಿಸಬೇಕಾಗಿದೆ. ಮಳೆ ಕೊರತೆಯನ್ನು ಗಮನದಲ್ಲಿರಿಸಿ ಜುಲೈ ಅoತ್ಯದವರೆಗೆ ಕಾಯಲು ಮನವಿ ಮಾಡಿದ್ದೆವು, ತೀರ್ಪು ನೋಡಿದರೆ ನಮ್ಮ ಮನವಿಯನ್ನು ಪರಿಗಣಿಸಿದಂತೆ ಕಾಣುತ್ತಿಲ್ಲ.
ಬಿಳಿಗುಂಡ್ಲುವಿನಲ್ಲಿ ಅಳತೆ ಮಾಡುವಾಗ,… pic.twitter.com/keXjeClOtd
— Siddaramaiah (@siddaramaiah) July 12, 2024
ಜುಲೈ 31ರ ವರೆಗೆ ತಮಿಳುನಾಡಿಗೆ (Tamil Nadu) ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದು ತುರ್ತು ಸಭೆ ನಡೆಸಿದರು. ಜಲ ಸಂಪನ್ಮೂಲ ಇಲಾಖೆಯೊಂದಿಗೆ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಇಲಾಖೆಯ ಹಿರಿಯ ಅಧಿಕಾರಿಗಳು, ಕಾವೇರಿ ಕಣಿವೆ ಭಾಗದ ಸಚಿವರು ಭಾಗವಹಿಸಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿಎಂ ಮಾತನಾಡಿದರು.
ಕಾವೇರಿ ನೀರು ನೀರಾವರಿ ನಿಯಂತ್ರಣಾ ಸಮಿತಿ ನಿತ್ಯ 1 ಟಿಎಂಸಿ ನೀರು ತಮಿಳುನಾಡಿಗೆ ಬಿಡಲು ಸೂಚನೆ ನೀಡಿದೆ. ಆದ್ರೆ ಇಂದಿನ ಸಭೆಯಲ್ಲಿ ನಾವು ಪರಿಸ್ಥಿತಿ ವಿವರಿಸಿದ್ದೇವೆ. ಆದರೂ ಸಹ, ಮಳೆಯಿದ್ದರೂ ಈವರೆಗೆಗೆ 28% ನೀರು ಕೊರತೆ ನಮಗೆ ಇದೆ.ಇದನ್ನ ನಾವು ಸಭೆಯಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ನಮ್ಮ ನಿಲುವನ್ನೂ ಹೇಳಿದ್ದೇವೆ. ಯಾವುದೇ ತೀರ್ಮಾನ ಮಾಡಬಾರದು ಅಂತ ಮನವಿ ಮಾಡಿದ್ದೇವೆ. ಜುಲೈ ಕೊನೆವರೆಗೂ ಪರಿಸ್ಥಿತಿ ನೋಡಿಕೊಳ್ಳಬೇಕು ಅಂತ ಮನವಿ ಮಾಡಿದ್ದೇವೆ. ಇದರ ಹೊರತಾಗಿಯೂ ಸಿಡಬ್ಲ್ಯೂಆರ್‌ಸಿ ನಿತ್ಯ 1 ಟಿಎಂಸಿ ನೀರು ಬಿಡುವಂತೆ ಹೇಳಿದೆ ಎಂದು ವಿವರಿಸಿದ್ದಾರೆ.
ನೀರು ಬಿಡಲು ಸಾಧ್ಯವಿಲ್ಲ:
ಸದ್ಯ ಜುಲೈ ಅಂತ್ಯದವರೆಗೂ ಯಾವುದೇ ತೀರ್ಮಾನ ಮಾಡಬಾರದು ಅಂತ ಮನವಿ ಮಾಡಿದ್ದೇವೆ. ಕಾವೇರಿ ರಿವರ್ ಮ್ಯಾನೇಜ್ಮೆಂಟ್ ಅಥಾರಿಟಿ ಮುಂದೆ ಅಪೀಲ್ ಹಾಕಲು ನಿರ್ಧರಿಸಿದ್ದೇವೆ. ಏಕೆಂದರೆ ನಮ್ಮ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ 60 ಟಿಎಂಸಿ ಮಾತ್ರ ನೀರು ಇದೆ. ನಮಗೆ ಕುಡಿಯಲು, ಬೇಸಾಯಕ್ಕೆ ನೀರು ಬೇಕು. ಹೀಗಾಗಿ ಜುಲೈ ವರೆಗೂ ನೀರು ಬಿಡಲು ಸಾಧ್ಯವಿಲ್ಲ ಅಂತ ಹೇಳಿದ್ದೇವೆ. ನಿನ್ನೆ ಆದೇಶದ ವಿರುದ್ಧ ನಾವು ಅಪೀಲ್ ಹಾಕ್ತಿದ್ದೇವೆ ಎಂದು ಖಡಕ್ಕಾಗಿ ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಕಬಿನಿ ಜಲಾಶಯದಿಂದ ನೀರು ಬಿಡುತ್ತಿದ್ದೇವೆ. ಕಬಿನಿಗೆ ಎಷ್ಟು ಒಳಹರಿವು ಇದೆಯೋ, ಅಷ್ಟೇ ಹೊರಹರಿವು ಸಹ ಬಿಡ್ತಿದ್ದೇವೆ. ಕಬಿನಿ ಜಲಾಶಯ 96% ತುಂಬಿರುವ ಕಾರಣ ನೀರು ಹರಿಸುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ಮೇಲ್ಮನವಿ ಸಲ್ಲಿಸಲು ನಿರ್ಧಾರ:
ಸಿಡಬ್ಲ್ಯೂಆರ್‌ಸಿ ಆದೇಶದ ವಿರುದ್ಧವಾಗಿ ಅಪೀಲು ಹಾಕಲು ನಿರ್ಧಾರ ಮಾಡಿದ್ದೇವೆ. ನೀರು ಬಿಡಲು ಆಗೊಲ್ಲ ಅಂತ ಅಪೀಲ್ ಹಾಕಲು ನಿರ್ಧಾರ. ಕಾವೇರಿ ರಿವರ್ ಮ್ಯಾನೇಜ್ಮೆಂಟ್ ಅಥಾರಿಟಿ ಮುಂದೆ ಮೇಲ್ಮನವಿ ಹಾಕಲು ನಿರ್ಧಾರ ಮಾಡಿದ್ದೇವೆ.
ಜು.14ರಂದು ಸರ್ವಪಕ್ಷ ಸಭೆ:
ಸರ್ಕಾರ ಈ ಆದೇಶದ ವಿರುದ್ಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯ ಇಂದಿನ ಸಭೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಜುಲೈ 14ರ ಸಂಜೆ 4 ಗಂಟೆಗೆ ಸರ್ವಪಕ್ಷ ಸಭೆ ಕರೆಯಲು ನಿರ್ಧಾರ ಮಾಡಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಭೆಯ ನೇತೃತ್ವ ವಹಿಸಲಿದ್ದಾರೆ. ನಾನೂ ಸಭೆಯಲ್ಲಿ ಭಾಗವಹಿಸುತ್ತೇನೆ. ಕೇಂದ್ರ ಮಂತ್ರಿಗಳು, ಕಾವೇರಿ ಭಾಗದ ಲೋಕಸಭೆ, ರಾಜ್ಯಸಭೆ ಸದಸ್ಯರು ಮತ್ತು ಶಾಸಕರನ್ನು ಸಹ ಸಭೆಗೆ ಆಹ್ವಾನಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನಿಸಲಾಗುವುದು.