ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದ ಅವಧಿಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹುಬ್ಲೋಟ್ ವಾಚ್ ಗಿಫ್ಟ್ ಪ್ರಕರಣ ಮತ್ತೆ ಸಿದ್ದರಾಮಯ್ಯ ಅವರಿಗೆ ಕಂಟಕವಾಗುವ ಸ್ಥಿತಿ ನಿರ್ಮಾಣವಾಗಿದೆ.
ಪ್ರಕರಣದಲ್ಲಿ ಸಿದ್ದರಾಮಯ್ಯ ಆಪ್ತ ಡಾ.ಗಿರೀಶ್ ಚಂದ್ರ ವರ್ಮಾ ಅವರು ನೀಡಿದ್ದ ದಾಖಲಾತಿಗಳು ಸುಳ್ಳು ಎಂದು ಆರೋಪ ಕೇಳಿಬಂದಿದೆ. ದುಬೈನಲ್ಲಿ ವಾಚ್ ಖರೀದಿ ಮಾಡಿದ್ದೆ ಎಂದು ಪ್ರಕರಣದ ತನಿಖಾ ಸಂಸ್ಥೆ ಎಸಿಬಿ ಮುಂದೆ ನೀಡಿದ್ದ ಹೇಳಿಕೆ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವರ್ಮಾ ಸಲ್ಲಿಸಿದ್ದರು. ಆದರೆ ಸದ್ಯ ಇದು ಸುಳ್ಳು, ಆ ದಾಖಲೆಗಳು ನಕಲಿ ಎಂದು ವಕೀಲ ನಟರಾಜ ಶರ್ಮಾ ಹೇಳಿದ್ದಾರೆ.
Advertisement
Advertisement
ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳು ವರ್ಮಾ ಅವರು ಕೊಟ್ಟ ದಾಖಲೆಗಳನ್ನು ಪರೀಶೀಲನೆ ಮಾಡದೆ ಹಾಗೂ ಅವರನ್ನು ವಿಚಾರಣೆಗೆ ಒಳಪಡಿಸದೇ, ಕೇವಲ ಹೇಳಿಕೆ ಮಾತ್ರ ಪಡೆದು ಕ್ಲೀನ್ ಚಿಟ್ ನೀಡಿದ್ದಾರೆ. ಆದರೆ ಎಸಿಬಿ ಅಧಿಕಾರಿಗಳಿಗೆ ನೀಡಿದ್ದ ದಾಖಲೆಗಳು ಇದೀಗ ಸುಳ್ಳು ಎಂದು ಸಾಬೀತಾಗಿದೆ. ಈ ಅವಧಿಯಲ್ಲಿ ಸಲ್ಲಿಕೆ ಆಗಿರುವ ಬಿಲ್ ನಕಲು ಎಂದು ಮಾರಾಟ ಸಂಸ್ಥೆ ಹೇಳಿಕೆ ನೀಡಿದೆ. ಅದ್ದರಿಂದ ಮರು ತನಿಖೆಗೆ ಒತ್ತಾಯ ಮಾಡುವಂತೆ ದೂರುದಾರ, ವಕೀಲ ನಟರಾಜ ಶರ್ಮಾ ಒತ್ತಾಯ ಮಾಡಿದ್ದಾರೆ. ಅಲ್ಲದೇ ಎಸಿಬಿ ಹೊರತಾದ ಪ್ರತ್ಯೇಕ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ನ್ಯಾಯಾಲದಲ್ಲಿ ಅರ್ಜಿ ಸಲ್ಲಿಸುವುದಾಗಿ ವಕೀಲರು ತಿಳಿಸಿದ್ದಾರೆ.
Advertisement
ಪ್ರಮುಖವಾಗಿ ಹುಬ್ಲೋಟ್ ವಾಚ್ ಸಂಬಂಧಿಸಿದಂತೆ ಪ್ರಕರಣ ದಾಖಲಾದ 1 ತಿಂಗಳ ಬಳಿಕ ವಾಚ್‍ಗೆ ಸಂಬಂಧಿಸಿದ ಅಬಕಾರಿ ಸುಂಕ ಕಟ್ಟಲಾಗಿದೆ. ಆದರೆ ಈ ಬಗ್ಗೆಯೂ ಸಿಬಿಐ ವಿಚಾರಣೆ ನಡೆಸಿಲ್ಲ. ಎಸಿಬಿ ತನಿಖೆ ನಡೆಸದೇ ಪ್ರಕರಣ ಕ್ಲೋಸ್ ಮಾಡಿದೆ ಎಂದು ನಟರಾಜ್ ಶರ್ಮಾ ಗಂಭೀರ ಆರೋಪ ಮಾಡಿದ್ದಾರೆ. ಒಂದೊಮ್ಮೆ ನ್ಯಾಯಾಲಯ ಅರ್ಜಿದಾರರ ಮನವಿಗೆ ಒಪ್ಪಿಗೆ ನೀಡಿದಲ್ಲಿ ಪ್ರರಕಣ ಮರು ತನಿಖೆಗೆ ಒಳಪಡುವ ಸಾಧ್ಯತೆಗಳಿದೆ.
Advertisement
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿ, ನಿಮ್ಮ ಸಿಎಂ ಸಮಾಜವಾದಿಯಲ್ಲ ಅವರು ಮಜಾವಾದಿ. ದುಬಾರಿ ಬೆಲೆಯ ವಾಚು, ಗ್ಲಾಸ್ ಗಳನ್ನು ಧರಿಸುತ್ತಾರೆ ಎಂದು ಹೇಳಿದ್ದರು. ವಾಚ್ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿದ್ದರಾಮಯ್ಯ ವಾಚ್ ಅನ್ನು ಸರ್ಕಾರದ ವಶಕ್ಕೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತ್ಯ ಹಾಡಿದ್ದರು. ವಿವಾದ ಅಂತ್ಯವಾಗಿದ್ದರೂ ಈ ವಾಚ್ ಪ್ರಕರಣ ಸಿದ್ದರಾಮಯ್ಯ ಅವರ ಇಮೇಜ್‍ಗೆ ಸ್ವಲ್ಪ ಹೊಡೆತ ನೀಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಟೀಕೆ ಮಾಡುತ್ತಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv