ಬೆಂಗಳೂರು: ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ಸಾಮಾಜಿಕ ನ್ಯಾಯದ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಕೈಮೀರಿಹೋಗುವ ಮೊದಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ಧವಾಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ರೂಪಿಸಿ ಅದನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿ ಅದರ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅವಕಾಶ ಕೋರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದರು.
Advertisement
Advertisement
ಸುಪ್ರೀಂ ಕೋರ್ಟ್ ಮಂಗಳವಾರ ನೀಡಿರುವ ಆದೇಶದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಇದೊಂದೇ ಪರಿಹಾರ. ಈ ಆದೇಶದಿಂದ ಹಿಂದುಳಿದ ಜಾತಿಗಳಿಗೆ ಆಗಲಿರುವ ಈ ಅನ್ಯಾಯವನ್ನು ತಪ್ಪಿಸಲು ರಾಜ್ಯ ಸರ್ಕಾರ ಕಾನೂನು ತಜ್ಞರ ಜೊತೆ ಸಮಾಲೋಚಿಸಿ, ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಸಮರೋಪಾದಿಯಲ್ಲಿ ಕಾನೂನು ಹೋರಾಟಕ್ಕೆ ತಯಾರಾಗಬೇಕು ಎಂದರು.
Advertisement
ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೆ ಅನ್ವಯಿಸಲಾಗದು. ಇದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ವಿಶ್ವಾಸಾರ್ಹ ದತ್ತಾಂಶ ಆಧರಿಸಿದ ಮಾಹಿತಿಯನ್ನು ಮೂರು ಹಂತಗಳ ಪರಿಶೀಲನೆ ಮಾಡಲಾಗಿತ್ತು. ನಂತರ ಪ್ರತ್ಯೇಕ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕು ಎಂದು 2010ರಲ್ಲಿಯೇ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆದೇಶ ನೀಡಿತ್ತು. ಅದೇ ಆದೇಶವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸುತ್ತಾ ಬಂದಿದೆ ಎಂದು ತಿಳಿಸಿದರು.
Advertisement
ಹಿಂದುಳಿದ ಜಾತಿಗಳಿಗೆ ಸಂಬಂಧಿಸಿದ ಪರಿಷ್ಕೃತ ರಾಜಕೀಯ ಮೀಸಲಾತಿ ತಕ್ಷಣಕ್ಕೆ ಲಭ್ಯ ಇಲ್ಲದೆ ಹೋದರೆ ಅದಕ್ಕಾಗಿ ಕಾಯದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳೆಂದು ಪರಿಗಣಿಸಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ತನ್ನ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ.
ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯು ತನ್ನ ಆದೇಶದ ಎಲ್ಲಾ ರಾಜ್ಯಗಳಿಗೆ ಅನ್ವಯಿಸಿದೆ ಎಂದು ಹೇಳುತ್ತಲೇ ಇದ್ದರೂ ರಾಜ್ಯದ ಬಿಜೆಪಿ ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗದೆ ಕಾಲಹರಣ ಮಾಡುತ್ತಿರುವುದು ವಿಷಾದನೀಯ. ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ಮಾಡಿಕೊಳ್ಳದೆ, ಸರ್ವಜನರ ಹಿತದ ವಿಷಯದಲ್ಲಿ ರಾಜಕೀಯ ಮಾಡಲು ಹೋಗದೆ ಕಾಂತರಾಜ್ ಆಯೋಗದ ವರದಿಯನ್ನು ಒಪ್ಪಿಕೊಳ್ಳಬೇಕು ಎಂದರು. ಇದನ್ನೂ ಓದಿ: PSI ಎಕ್ಸಾಂ ಗೋಲ್ಮಾಲ್ – ಜೈಲಿನಲ್ಲಿ ಪತಿ ಕಂಡು ಕಿಂಗ್‍ಪಿನ್ ಕಣ್ಣೀರು
ಸುಪ್ರೀಂ ಕೋರ್ಟ್ ಹಿಂದಿನ ತನ್ನ ಆದೇಶಗಳಲ್ಲಿ ರಾಜ್ಯ ಸರ್ಕಾರಗಳು ಈಗಾಗಲೇ ನಡೆಸಿರುವ ಸಮೀಕ್ಷೆಯ ಅಂಕಿ-ಅಂಶ ಮತ್ತು ಮಾಹಿತಿಯನ್ನು ಹೊಸ ಆಯೋಗಕ್ಕೆ ನೀಡಬಹುದು. ಆ ಮಾಹಿತಿಯನ್ನು ಆಧರಿಸಿ ಎರಡು ವಾರಗಳ ಅವಧಿಯೊಳಗೆ ಆಯೋಗ ಹಿಂದುಳಿದ ಜಾತಿಗಳ ಮೀಸಲಾತಿ ಬಗ್ಗೆ ಮಧ್ಯಂತರ ವರದಿಯನ್ನು ನೀಡಬಹುದು. ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಈಗಿನ ಬಿಕ್ಕಟ್ಟಿಗೆ ಪರಿಹಾರದ ಮಾರ್ಗವನ್ನೂ ಸೂಚಿಸಿದೆ ಎಂದು ತಿಳಿಸಿದರು.
ಈಗಿನ ಬಿಕ್ಕಟ್ಟಿಗೆ ಸುಪ್ರೀಂ ಕೋರ್ಟ್ ಪರಿಹಾರದ ಮಾರ್ಗ ಸೂಚಿಸಿದ್ದರೂ ರಾಜ್ಯದ ಬಿಜೆಪಿ ಸರ್ಕಾರ ಕಾಲಹರಣ ಮಾಡಿ ಅವಕಾಶವನ್ನು ಕಳೆದುಕೊಳ್ಳುತ್ತಿದೆ. ಈ ಬಗ್ಗೆ ಎರಡು ತಿಂಗಳುಗಳ ಹಿಂದೆಯೇ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಎಚ್ಚರಿಸಿದ್ದೆ. ಈ ಬಗ್ಗೆ ಮುಖ್ಯಮಂತ್ರಿಗಳು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿಯೂ ಸಲಹೆಗಳನ್ನು ನೀಡಿದ್ದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಿಎಸ್‍ಐ ಹಗರಣ: ಸಿಐಡಿ ವಶಕ್ಕೆ ಕಾಂಗ್ರೆಸ್ ಮುಖಂಡ
ಸುಪ್ರೀಂ ಕೋರ್ಟ್ ಆದೇಶದ ನಂತರ ಮಹಾರಾಷ್ಟ್ರ ಸರ್ಕಾರ ಅವಸರದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಪಡೆದ ಮಧ್ಯಂತರ ವರದಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತ್ತು. ವೈಜ್ಞಾನಿಕವಾಗಿ ಸಂಗ್ರಹಿಸಿದ ಅಂಕಿ-ಅಂಶಗಳನ್ನು ಸಂಗ್ರಹಿಸದ ಮಧ್ಯಂತರ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು ಎಂದರು.
ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ನ್ಯಾಯವಾದಿ ಕಾಂತರಾಜ್ ಅಧ್ಯಕ್ಷತೆಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯದ ಜನತೆಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಈ ರೀತಿ ಮನೆಮನೆಗೆ ಹೋಗಿ ವೈಜ್ಞಾನಿಕವಾಗಿ ದೇಶದ ಬೇರೆ ಯಾವ ರಾಜ್ಯಗಳಲ್ಲಿಯೂ ಸಮೀಕ್ಷೆಯನ್ನು ನಡೆಸಲಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.