ಬೆಳಗಾವಿ: ಯತ್ನಾಳ್ (Basangouda Patil Yatnal) ಒಬ್ಬ ದ್ವೇಷದ ರಾಜಕಾರಣಿ, ಮಹಾನ್ ಸುಳ್ಳುಗಾರ, ಚುನಾವಣೆ ಗೆಲ್ಲಲು ಈ ರೀತಿ ಮಾತಾಡಬಾರದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ಬೆಳಗಾವಿಯ (Belagavi) ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಸಿಸ್ ನಂಟಿರುವ ಪೀರಾ ಮೌಲಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಬಿಜೆಪಿ ನಾಯಕ ಯತ್ನಾಳ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಅವರ ಜೊತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಅವರು ಸುಮ್ಮನಿದ್ದರು? ಪೀರಾ ಮೌಲಿ ಅವರು ಆರೋಪ ಸಾಬೀತು ಮಾಡಿ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ ಅದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಸಿಎಂ ತವರಿಗೆ ಶೀಘ್ರವೇ ಅಂಗನವಾಡಿ ಕಟ್ಟಡದ ಭರವಸೆ
ಈಗ ಆರೋಪ ಮಾಡುತ್ತಿರುವ ಯತ್ನಾಳ್, ಅವರದ್ದೇ ಸರ್ಕಾರ ಇದ್ದಾಗ ಏನು ಮಾಡ್ತಿದ್ರು? ಅವರು ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಪ್ರಯತ್ನ ಮಾಡಿದ್ದರು. ಎರಡೂ ಸಿಗಲಿಲ್ಲ ಅದಕ್ಕೆ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ರೇವಂತ್ ರೆಡ್ಡಿ (Revanth Reddy) ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದು, ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೊರಟಿದ್ದೇನೆ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ವಿಸ್ತರಣೆ ಆಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ, ವಿಸ್ತರಣೆ ಅಲ್ಲ ದಕ್ಷಿಣ ಭಾರತದಲ್ಲಿ ಬಿಜೆಪಿಯೇ ಇಲ್ಲ ಎಂದಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಲ್ಯಾಣ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗೋವಿಂದ ಕಾರಜೋಳ ಅವರ ಕಾಲದಲ್ಲಿ ಎಸ್‍ಟಿಪಿ-ಟಿಎಸ್‍ಪಿ ಹಣ ಯಾಕೆ ಕಡಿಮೆ ಇತ್ತು ಎಂದು ಅವರು ಹೇಳಬೇಕು. ನಾನು ಕೊನೆಯ ಬಜೆಟ್ ಮಂಡಿಸಿದಾಗ 30 ಸಾವಿರ ಕೋಟಿ ರೂ. ಹಣ ಇತ್ತು. ಬಿಜೆಪಿ ಕಾಲದಲ್ಲಿ 25 ಸಾವಿರ ಕೋಟಿ ರೂ. ಆಯ್ತು, ಬಿಜೆಪಿಯವರು ಇದಕ್ಕೆ ಉತ್ತರಿಸಲಿ ಎಂದು ಅವರು ಹೇಳಿದ್ದಾರೆ.
ಎಸ್‍ಟಿಪಿ-ಟಿಎಸ್‍ಪಿ ಕಾಯ್ದೆಯಲ್ಲಿನ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಅನ್ಯ ಕಾರ್ಯಗಳಿಗೆ ವರ್ಗಾವಣೆಗೆ ಅವಕಾಶ ನೀಡುವ ಕಲಂ 7ಡಿಯನ್ನು ಹಿಂದೆ ಸಿಎಂ ಆಗಿದ್ದಾಗ ರದ್ದು ಮಾಡುತ್ತೇವೆ ಎಂದ ವಿಚಾರವಾಗಿ, ಕಲಂ ರದ್ದು ಮಾಡುತ್ತೇವೆ. ಈ ಬಗ್ಗೆ ಶೀಘ್ರದಲ್ಲೇ ಆದೇಶವನ್ನು ಹೊರಡಿಸುತ್ತೇವೆ ಎಂದು ಅವರು ಹೇಳಿದರು. ಇದನ್ನೂ ಓದಿ: ಜೈನಮುನಿ ಹತ್ಯೆ ಪ್ರಕರಣ- ಹಣವಷ್ಟೇ ಅಲ್ಲ, ಬೈಗುಳವೇ ಕೊಲೆಗೆ ಕಾರಣ?