ಬೆಂಗಳೂರು: ಕರ್ನಾಟಕ ರಾಜಕಾರಣದ ಟಗರು ಎಂದೇ ಗುರುತಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ತಮ್ಮದೇ ಶೈಲಿಯ ಭಾಷಣ ಮತ್ತು ರಾಜಕೀಯಕ್ಕೆ ಹೆಸರುವಾಸಿಯಾಗಿರುವ ಸಿದ್ದರಾಮಯ್ಯನವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ನಿವೃತ್ತಿಯ ಮಾತು ಹೇಳುವ ಮೂಲಕ ಎಲ್ಲ ಅಭಿಮಾನಿ ಮತ್ತು ಕಾರ್ಯಕರ್ತರಿಗೂ ಶಾಕಿಂಗ್ ನ್ಯೂಸ್ ನೀಡಲು ಸಿದ್ದರಾಮಯ್ಯನವರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಾಜಕಾರಣದಿಂದ ದೂರ ಉಳಿದು 38 ವರ್ಷಗಳ ಬಳಿಕ ಮತ್ತೊಮ್ಮೆ ಕಪ್ಪು ಕೋಟ್ ಹಾಕಿ ವಕೀಲ ವೃತ್ತಿ ಆರಂಭಿಸುತ್ತೇನೆ ಎಂದು ಮಾಜಿ ಸಿಎಂ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಸಿದ್ದರಾಮಯ್ಯನವರು 1982ರವರೆಗೆ ಮೈಸೂರಿನಲ್ಲಿ ವಕೀಲಿ ವೃತ್ತಿ ಮಾಡಿದ್ದರು. ನಂತರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದರು. ಇಂದಿಗೂ ಮೈಸೂರ್ ಬಾರ್ ಕೌನ್ಸಿಲ್‍ನ ಅಜೀವ ಸದಸ್ಯತ್ವವನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಸಿಎಂ ಆಗೋವರೆಗೂ ಬಾರ್ ಕೌನ್ಸಿಲ್‍ನ ಎನ್‍ರೋಲ್ಮೆಂಟ್ ಹೊಂದಿದ್ದರು. ಸಿಎಂ ಆಗುತ್ತಿದ್ದಂತೆಯೇ ಬಾರ್ ಕೌನ್ಸಿಲ್‍ಗೆ ಎನ್‍ರೋಲ್ಮೆಂಟ್ ಕಾರ್ಡ್ ಸರೆಂಡರ್ ಮಾಡಿದ್ದರು. ಅಂದಿನಿಂದ ಸಿದ್ದರಾಮಯ್ಯ ಎನ್‍ರೋಲ್ಮೆಂಟ್ ಕಾರ್ಡ್ ಅಮಾನತ್ತಿನಲ್ಲಿತ್ತು. ಈಗ ಎನ್‍ರೋಲ್ಮೆಂಟ್ ರಿನೀವಲ್‍ಗೆ ಸಿದ್ದರಾಮಯ್ಯನವರು ಮುಂದಾಗಿದ್ದಾರೆ. ರಿನೀವಲ್‍ಗಾಗಿ ರಾಜ್ಯ ಬಾರ್ ಕೌನ್ಸಿಲ್‍ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಆಪ್ತರ ಬಳಿ ಅಧಿಕೃತ ಘೋಷಣೆ: ಜನವರಿ 22ರ ಬುಧವಾರ ಮೈಸೂರಿನಲ್ಲಿ ವಕೀಲ ವೃತ್ತಿಗೆ ವಾಪಸ್ ಬರುವುದರ ಬಗ್ಗೆ ಆಪ್ತರ ಮುಂದೆ ಘೋಷಣೆ ಮಾಡಿಕೊಂಡಿದ್ದಾರಂತೆ. ಇವತ್ತಿನ ಯಾವ ವಿಷಯದ ಬಗ್ಗೆ ಹೋರಾಟ ಮಾಡಲು ನಾನು ರೆಡಿ, ಹೈಕೋರ್ಟ್ ಆಗಲಿ, ಸುಪ್ರೀಂಕೋರ್ಟ್ ಆಗಲಿ ವಾದ ಮಾಡೋಕೆ ನಾನು ಸಿದ್ಧನಾಗಿದ್ದೇನೆ. ಎನ್‍ರೋಲ್ಮೆಂಟ್ ಅಮಾನತು ವಾಪಸ್ ಪಡೆಯುವ ಪ್ರಕ್ರಿಯೆ ಮುಗಿದಿದೆ. ಮೈಸೂರಿನಲ್ಲಿ ದಾಖಲೆ ಪತ್ರಗಳನ್ನ ತರಿಸಿಕೊಂಡು ಸಹಿಮಾಡಿ ಕೊಟ್ಟಿದ್ದಾರೆ ಎಂಬ ಮಾತುಗಳು ಸಿದ್ದರಾಮಯ್ಯರ ಆಪ್ತವಲಯದಲ್ಲಿ ಕೇಳಿ ಬರುತ್ತಿವೆ.
Advertisement
ಫೆಬ್ರವರಿಯಿಂದ ವಕೀಲಿ ವೃತ್ತಿ ಆರಂಭ? ನಿನ್ನೆ ಶುಕ್ರವಾರವೇ ರಾಜ್ಯ ಬಾರ್ ಕೌನ್ಸಿಲ್‍ಗೆ ಸಿದ್ದರಾಮಯ್ಯ ಅರ್ಜಿ ಸಲ್ಲಿಕೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅರ್ಜಿ ಸಲ್ಲಿಕೆ ಸಾಧ್ಯವಾಗಿಲ್ಲ. ಆಪ್ತ ವಲಯದ ವಕೀಲರೊಬ್ಬರ ಬಳಿ ಸಿದ್ದರಾಮಯ್ಯ ದಾಖಲೆಗಳನ್ನ ನೀಡಿದ್ದು, ರಾಜ್ಯ ಬಾರ್ ಕೌನ್ಸಿಲ್‍ಗೆ ಎನ್‍ರೋಲ್ಮೆಂಟ್ ರಿನೀವಲ್ ಅರ್ಜಿ ಸಲ್ಲಿಕೆಗೆ ಸೂಚಿಸಿದ್ದಾರೆ. ಜನವರಿ 31ರಂದು ಅಧಿಕೃತವಾಗಿ ರಾಜ್ಯ ಬಾರ್ ಕೌನ್ಸಿಲ್ ಗೆ ಸಲ್ಲಿಕೆ ಆಗಲಿದೆ. ಫೆಬ್ರವರಿಯಿಂದಲೇ ಸಿದ್ದರಾಮಯ್ಯ ವಕೀಲ ವೃತ್ತಿ ಅಧಿಕೃತವಾಗಿ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ಹೈಕಮಾಂಡ್ ಮೇಲೆ ಮುನಿಸು: ಕಳೆದ ಕೆಲ ದಿನಗಳಿಂದ ರಾಜ್ಯ ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗ ಎಂಬ ಬಣಗಳು ಹುಟ್ಟಿಕೊಂಡಿವೆ. ಸಿಎಲ್ ಪಿ ಮತ್ತು ವಿಪಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯನವರು ಎರಡು ಸ್ಥಾನಗಳನ್ನು ಒಬ್ಬರಿಗೆ ನೀಡಬೇಕು ಮತ್ತು ತಮಗೆ ಕೊಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು. ಇತ್ತ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಮುನ್ನಲೆಯಲ್ಲಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಸೂಕ್ತ ಎಂದು ಸಿದ್ದರಾಮಯ್ಯ ಸೂಚಿಸಿದ್ದರು ಎಂದು ತಿಳಿದು ಬಂದಿತ್ತು. ಇತ್ತ ಹೈಕಮಾಂಡ್ ತನ್ನ ನಿರ್ಧಾರವನ್ನು ಪ್ರಕಟಿಸದೇ ದಿನವನ್ನು ಮುಂದೂಡುತ್ತಿದೆ. ಕೆಪಿಸಿಸಿ ಹುದ್ದೆಗಳ ಆಯ್ಕೆಯ ವಿಳಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ರಾಜಕಾರಣಕ್ಕೆ ಗುಡ್ ಬೈ ಹೇಳಲು ಸಿದ್ಧತೆ ನಡೆಸಿದ್ದಾರೆ ಎಂಬುವುದು ಮತ್ತೊಂದು ಚರ್ಚೆ.