– ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
– ದೇವೇಗೌಡರು ಯಾರನ್ನೂ ಬೆಳೆಸಲ್ಲ
– ಧರ್ಮಸಿಂಗ್, ಬೊಮ್ಮಾಯಿ ಸರ್ಕಾರ ಬೀಳಿಸಿದ್ದು ಯಾರು?
– ಯಾರನ್ನು ಬೆಳೆಸಲ್ಲ, ಬರೀ ಕುಟುಂಬದವರನ್ನೇ ಬೆಳೆಸುತ್ತಾರೆ
ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನವಾಗಲೂ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಮತ್ತು ರೇವಣ್ಣ ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರಾನೇರವಾಗಿ ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಇತ್ತೀಚೆಗೆ ದೇವೇಗೌಡರು ಸಂದರ್ಶನವೊಂದನ್ನು ಕೊಟ್ಟಿದ್ದಾರೆ. ಅದರ ಬಗ್ಗೆ ನಾನು ಪ್ರತಿಕ್ರಿಯಿಸಬಾರದು ಅಂದುಕೊಂಡಿದ್ದೆ. ಆದರೆ ನನ್ನ ಮೇಲೆ ಅವರು ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ. ಇದರಿಂದ ನಾನು ಮೌನವಾಗಿದ್ದರೆ ಜನರಲ್ಲಿ ಬೇರೆ ಭಾವನೆ ಮೂಡಬಹುದು ಎಂದು ಪ್ರತಿಕ್ರಿಯೆಗೆ ಮುಂದಾಗಿದ್ದೇನೆ ಎಂದು ಹೇಳಿ ಗೌಡರ ಕುಟುಂಬದ ವಿರುದ್ಧ ಒಂದೊಂದೆ ಆರೋಪ ಮಾಡಿ ಕಿಡಿಕಾರತೊಡಗಿದರು. ಇದನ್ನೂ ಓದಿ: ದೋಸ್ತಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ – ಬಹಿರಂಗವಾಗಿಯೇ ಎಚ್‍ಡಿಡಿ ಕಿಡಿ
Advertisement
Advertisement
ದೇವೇಗೌಡರು ನನ್ನ ಮೇಲೆ ಮಾಡಿರುವ ಗುರುತರ ಆರೋಪ ಆಧಾರ ರಹಿತವಾಗಿದೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದಿದ್ದಾರೆ. ಸಿದ್ದರಾಮಯ್ಯನಿಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದನ್ನು ನೋಡುವುದಕ್ಕೆ ಆಗಲಿಲ್ಲ ಎಂದಿದ್ದಾರೆ. ಈ ಮೂಲಕ ನನಗೂ ಅವರಿಗೂ ರಾಜಕೀಯ ವೈರತ್ವ ಇದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
Advertisement
ನನಗೆ ಬಿಜೆಪಿ ಅಧಿಕಾರ ಬರಬಾರದು ಎಂದು ವಿರೋಧವಿತ್ತು. ಆದರೆ ಹೈಕಮಾಂಡ್ ಜೆಡಿಎಸ್ ಬೆಂಬಲ ಪಡೆದು ಅವರಿಗೆ ಸಿಎಂ ಸ್ಥಾನ ಕೊಡಿ ಎಂದು ಹೇಳಿತ್ತು. ಆಗ ನಾನು ಮರುಮಾತನಾಡದೇ ಸಮ್ಮಿಶ್ರ ಸರ್ಕಾರಕ್ಕೆ ಒಪ್ಪಿಕೊಂಡೆ. ಅದರಂತೆಯೇ 14 ತಿಂಗಳು ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಯಾವತ್ತು ಹಸ್ತಕ್ಷೇಪ ಮಾಡಿಲ್ಲ. ಸಮ್ಮಿಶ್ರ ಸರ್ಕಾರದ ಪತನಕ್ಕೆ ದೇವೇಗೌಡರು, ಕುಮಾರಸ್ವಾಮಿ ಮತ್ತು ರೇವಣ್ಣ ಕಾರಣ ಎಂದು ಎಲ್ಲಾ ಶಾಸಕರು ಮಾತನಾಡುತ್ತಿದ್ದಾರೆ. ಶಾಸಕರ ಎಲ್ಲಾ ಕೆಲಸವನ್ನು ಮಾಡಿಕೊಟ್ಟು ಕ್ಷೇತ್ರದ ಸಮಸ್ಯೆ ಆಲಿಸಿದ್ದರೆ ಹೀಗಾಗುತ್ತಿರಲಿಲ್ಲ. ಶಾಸಕರಷ್ಟೇ ಅಲ್ಲಾ ಸಚಿವರುಗಳು ಆರೋಪಿಸಿದ್ದಾರೆ. ಯಾರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೆ ಏಕಪಕ್ಷಿಯ ನಿರ್ಧಾರ ತೆಗೆದುಕೊಂಡಿದ್ದೆ ಸರ್ಕಾರ ಪತನಕ್ಕೆ ಕಾರಣ ಎಂದು ಆರೋಪಿಸಿದರು.
Advertisement
ನಾನು 5 ವರ್ಷ ಸಿಎಂ ಆಗಿದ್ದಾಗ ಯಾಕೆ ಒಬ್ಬ ಶಾಸಕ ಮಾತನಾಡಲಿಲ್ಲ. ಸುಮ್ಮನೆ ನನ್ನ ಮೇಲೆ ಗೂಬೆ ಕೂರಿಸಿದರೆ, ನನಗೆ ಅರ್ಥ ಆಗಲ್ಲ ಅಂದುಕೊಂಡಿದ್ದಾರೆ. ನಾನು ಸಿಎಲ್‍ಪಿ ನಾಯಕನಾಗಿ ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೆ. ಆಗ 5-6 ಸಮನ್ವಯ ಸಮಿತಿ ಸಭೆ ಮಾಡಿದ್ದೆವು. ಆದರೆ ಸಮನ್ವಯ ಸಮಿತಿಯ ಯಾವ ನಿರ್ಧಾರವನ್ನು ಅವರು ಜಾರಿಗೆ ತರಲಿಲ್ಲ. ಬರಿ ಆಯ್ತು ಆಯ್ತು ಎಂದು ಸಭೆಯಲ್ಲಿ ಒಪ್ಪಿಕೊಂಡು ಹೋಗುತ್ತಿದ್ದರು ಅಷ್ಟೇ. ಇವರ ನಡವಳಿಕೆಯಿಂದ ಸರ್ಕಾರ ಪತನವಾಗಿದೆ. ಸರ್ಕಾರ ಉಳಿಸುವುದಕ್ಕೆ ಎಲ್ಲಾ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದು ತಿಳಿಸಿದರು.
ನನ್ನ ಮೇಲೆ ಸುಳ್ಳು ಆರೋಪ ಮಾಡಿ ಯಾವ ಪಕ್ಷ ಖುಷಿ ಪಡಿಸುತ್ತಾರೋ ಗೊತ್ತಿಲ್ಲ. ಇದು ಕಪೋಲ ಕಲ್ಪಿತ ಆರೋಪವಾಗಿದೆ. ವಿರೋಧ ಪಕ್ಷದ ನಾಯಕನಾಗಲು ಸರ್ಕಾರ ಉರುಳಿಸಿದ್ದು ದೇಶದ ಇತಿಹಾಸದಲ್ಲೇ ಇಲ್ಲ. ದೇವೇಗೌಡರು ಅದೆಲ್ಲಿ ಕಂಡಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಬೀಳಿಸುವಂತಹ ನೀಚ ರಾಜಕಾರಣ ನಾನು ಮಾಡಲ್ಲ. ಅದು ಏನಿದ್ದರೂ ದೇವೇಗೌಡರು ಹಾಗೂ ಅವರ ಮಕ್ಕಳ ಹುಟ್ಟುಗುಣವಾಗಿದೆ. ಧರ್ಮಸಿಂಗ್ ಸರ್ಕಾರ ಬೀಳಿಸಿದ್ದು ಯಾರು? ಬೊಮ್ಮಾಯಿ ಸರ್ಕಾರ ಬೀಳಿಸಿದ್ದು ಯಾರು ಎಂದು ಪ್ರಶ್ನೆ ಮಾಡಿ ತಿರುಗೇಟು ನೀಡಿದರು.
ಸಿದ್ದರಾಮಯ್ಯನವರಿಂದ ಬಿಜೆಪಿ ರಾಜ್ಯದಲ್ಲಿ ಬೆಳೆಯುತ್ತಿದೆ ಎನ್ನುವ ದೇವೇಗೌಡರ ಆರೋಪಕ್ಕೆ, ಇವತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರೆ ಅದಕ್ಕೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಕಾರಣ. ಬಿಜೆಪಿ ಜೊತೆ ಸರ್ಕಾರ ಮಾಡಿದರೆ ನನ್ನ ಹೆಣದ ಮೇಲೆ ಮಾಡಬೇಕು ಅಂದಿದ್ದರು. ಆದರೆ ದೇವೇಗೌಡರು ಅನುಮತಿ ಕೊಡದೆ ಕುಮಾರಸ್ವಾಮಿ ಸರ್ಕಾರ ಮಾಡಿದ್ರಾ? ಎಲ್ಲಾ ನಾಟಕ ಮಾಡುತ್ತಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ವಚನ ಭ್ರಷ್ಟರಾಗಿದ್ದೆ ಬಿಜೆಪಿ ಬೆಳೆಯಲು ಕಾರಣವಾಗಿದೆ. ಅಸಂಬದ್ಧವಾದ ಅಸತ್ಯವಾದ ಆರೋಪ ನನ್ನ ಮೇಲೆ ಮಾಡುತ್ತಿದ್ದಾರೆ. ಅವರ ಸೇಡಿನ ಆಕ್ರೋಶ ಸಾಮಾನ್ಯ ಜನರಿಗೆ ಅರ್ಥ ಆಗುತ್ತೆ. ದೇವೇಗೌಡರು ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತಾರೋ ಅವರಿಗೆ ಮೋಸ ಮಾಡುತ್ತಾರೆ ಎಂದರು.
ನನಗೆ ಸಿಎಂ ಸ್ಥಾನ ತಪ್ಪಿಸಿದ್ದರು ಅನ್ನೋ ಸಿಟ್ಟಿದೆ ಅಂದಿದ್ದಾರೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಇವರೆ ಅದನ್ನ ಹೇಳುತ್ತಾರೆ. ನಾನೆ ಸಿಎಂ ಸ್ಥಾನ ತಪ್ಪಿಸಿದೆ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಬೇಡ ಎಂದು ಹೇಳಿದ್ದೆ. ಆದರೆ ಹೈಕಮಾಂಡ್ ಕೊನೆಗೆ ತೀರ್ಮಾನ ಮಾಡಿತ್ತು. ಹೀಗಾಗಿ ಒಟ್ಟಾಗಿ ಪ್ರಚಾರ ಮಾಡಿದ್ದೇವೆ. ಆದರೆ ನಾನು ಮತ್ತು ನನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಹೇಳಿದ್ದಾರೆ. ಹಾಗಾದರೆ ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ ಸೋಲಿಗೆ ಕಾರಣ ಯಾರು? ಹಾಸನದಲ್ಲಿ ಮೊಮ್ಮಗ ಗೆದ್ದಿದ್ದಾರೆ. ಅಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡಿಲ್ವಾ ಎಂದು ಪ್ರಶ್ನಿಸಿದರು.
ಗೌಡರ ಕುಟುಂಬದವರೆಲ್ಲರೂ ಚುನಾವಣೆಗೆ ನಿಂತುಕೊಂಡಿದ್ದರು. ಹೀಗಾಗಿ ನಾವು ಬೇಸತ್ತು ವೋಟು ಹಾಕಿಲ್ಲ ಎಂದು ಜನರು ನನಗೆ ಹೇಳಿದ್ದಾರೆ. ದೇವೇಗೌಡರು ಯಾರನ್ನು ಬೆಳೆಸಲ್ಲ. ಅವರ ಮಕ್ಕಳು, ಅವರ ಕುಟುಂಬದವರನ್ನೇ ಬೆಳೆಸುತ್ತಾರೆ. ಸ್ವಜಾತಿಯವರನ್ನೇ ಬೆಳೆಸಲ್ಲ. ನಾಗೇಗೌಡ, ಬೈರೇಗೌಡ, ಗೋವಿಂದೇಗೌಡ ಅವರನ್ನೆಲ್ಲಾ ಯಾರು ತುಳಿದಿದ್ದು? ಬಚ್ಚೆಗೌಡರನ್ನು ಕೇಳಿ ಜಾಸ್ತಿ ಹೇಳುತ್ತಾರೆ ಎಂದರು.
ದೇವೇಗೌಡರಿಗೆ ಮೊದಲಿನಿಂದಲು ನನ್ನ ಕಂಡರೆ ಆಗಲ್ಲ. ಒಕ್ಕಲಿಗ ವಿರೋಧಿ, ಲಿಂಗಾಯತ ವಿರೋಧಿ ಎಂದು ಅಪಪ್ರಚಾರ ಮಾಡುತ್ತಾರೆ. ನನಗೆ ಎಲ್ಲ ಜಾತಿ, ಧರ್ಮದಲ್ಲೂ ಸ್ನೇಹಿತರಿದ್ದಾರೆ. ಆದರೆ ಸುಮ್ಮನೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸಬಾರದು. ಇದರಿಂದ ರಾಜಕೀಯ ಲಾಭ, ಅನುಕಂಪ ಬರುತ್ತದೆ ಎಂದುಕೊಂಡದ್ದರೆ ತಪ್ಪು. ಅವರಿಗೆ ಬೇರೆಯವರ ಮೇಲೆ ಆರೋಪ ಮಾಡುವುದೇ ಕೆಲಸ. ಇವೆಲ್ಲ ದೇವೇಗೌಡರ ಹಳೆಯ ಗಿಮಿಕ್ಸ್, ದೇವೇಗೌಡರು ಮಾಡಿರುವ ಆರೋಪಗಳು ಸುಳ್ಳು. ರಾಜ್ಯದ ಜನರು ಬುದ್ಧಿವಂತರು ನನ್ನ ಮತ್ತು ಅವರ ರಾಜಕೀಯ ಜೀವನವನ್ನು ನೋಡಿದ್ದಾರೆ. ಹೀಗಾಗಿ ಅವರಿಗೆ ಎಲ್ಲವನ್ನು ತಿಳಿಸಿದೆ ಎಂದು ಸಿದ್ದರಾಮಯ್ಯ ಗುಡುಗಿದರು.
ದೇಶದಲ್ಲಿ ಕೋಮುವಾದಿ ಬಿಜೆಪಿ ಅಧಿಕಾರದಲ್ಲಿದೆ. ಕಳೆದು 5 ವರ್ಷದಿಂದ ಅಧಿಕಾರಕ್ಕೆ ಬಂದ ಮೇಲೆ ವಿಪಕ್ಷಗಳನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇಂತಹ ರಾಜಕೀಯ ಸನ್ನಿವೇಶದಲ್ಲಿ ಎಲ್ಲಾ ಜಾತ್ಯಾತೀತ ಪಕ್ಷಗಳು ಒಗ್ಗಟ್ಟಾಗಿ ಅವರನ್ನ ಹಿಮ್ಮೆಟ್ಟಿಸಲು ಹೋರಾಟ ಮಾಡಬೇಕು. ನಾನು ಅದರಲ್ಲಿ ನಂಬಿಕೆ ಇಟ್ಟವನು ನಾನು. ಪ್ರಧಾನಿ ಮೋದಿ ಐಟಿ, ಇಡಿ ಸಿಬಿಐ ಎಲ್ಲಾ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಂಡು ಸರ್ವಾಧಿಕಾರಿ ದೋರಣೆ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.