ಬೆಂಗಳೂರು: ಬಿಜೆಪಿಯವರು ಅತೃಪ್ತ ಶಾಸಕರನ್ನು ವಿಶ್ವಾಸ ಮತಯಾತಚನೆಗೆ ಬಾರದಂತೆ ತಡೆದು ವಾಮ ಮಾರ್ಗದಿಂದ ಅಧಿಕಾರಕ್ಕೆ ಬರಲು ಯತ್ನಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ವಿಶ್ವಾಸ ಮತಯಾಚನೆ ಚರ್ಚೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಮೈತ್ರಿ ಶಾಸಕರಿಗೆ ಆಸೆ ಆಮಿಷಗಳನ್ನು ಒಡ್ಡಿ, ಪ್ರಚೋದನೆ ನೀಡಿ ಪಕ್ಷಾಂತರ ಕಾಯ್ದೆ ಹಾಗೂ ಪಕ್ಷಾಂತರವನ್ನು ಉಲ್ಲಂಘಿಸುವಂತೆ ಮಾಡಿದ್ದಾರೆ. ವಿಪಕ್ಷ ನಾಯಕರ ಕುದುರೆ ವ್ಯಾಪಾರದಿಂದ ಮೈತ್ರಿ ಸರ್ಕಾರವು ವಿಶ್ವಾಸ ಮತಯಾಚನೆಯಲ್ಲಿ ಬಿದ್ದು ಹೋಯಿತು ಎಂದು ಕಿಡಿಕಾರಿದರು.
Advertisement
ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾನೂನು ಹಾಗೂ ಸಂವಿಧಾನಾತ್ಮಕವಾಗಿ ದೋಸ್ತಿ ಸರ್ಕಾರ ರಚನೆ ಮಾಡಲಾಗಿತ್ತು. ಆದರೆ ಬಿಜೆಪಿಯವರು ಹಿಂಬಾಗಿಲಿನಿಂದ ಬಂದು ಸರ್ಕಾರವನ್ನು ಬೀಳಿಸಿದರು. ವೈಯಕ್ತಿಕ ಕಾರಣಗಳಿಂದ ವಿಶ್ವಾಸ ಮತಯಾಚನೆಗೆ ಬರಲು ಆಗುವುದಿಲ್ಲ ಎಂದು ಶಾಸಕ ನಾಗೇಂದ್ರ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಅವರು ಗೈರು ಹಾಜರಾಗಿದ್ದಾರೆ ಎಂದು ತಿಳಿಸಿದರು.