-ಡಿಕೆಶಿ, ದೇವೇಗೌಡ್ರು ಒಂದಾಗಿದ್ದು ಏಕೆ?
ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಾನು ಒಂದು ಕಾಲದ ಸ್ನೇಹಿತರು. ಪರಿಸ್ಥಿತಿ ಅನುಗುಣವಾಗಿ ಅಂದು ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು. ಇಂದು ಅವರೇ ನಮಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯ ಅತ್ಯಂತ ಸ್ಪಷ್ಟವಾಗಿ ಸರ್ಕಾರಕ್ಕೆ ನಮ್ಮಿಂದ ಯಾವುದೇ ತೊಂದರೆ ಆಗಲ್ಲ ಅಂತಾ ತಿಳಿಸಿದ್ದಾರೆ. ಹಾಗಾಗಿ ಸಮ್ಮಿಶ್ರ ಸರ್ಕಾರ ಬೀಳುತ್ತೆ ಎಂಬುವುದು ಎಲ್ಲ ಊಹಾಪೋಹ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ನಾನು ಮುಖ್ಯಮಂತ್ರಿ ಆಗಿದ್ದಾಗಲೂ ಯಾರನ್ನು ಮಂತ್ರಿ ಮಾಡಲಿಲ್ಲ. ಪ್ರಧಾನಿಯಾದಗ ಜಿಲ್ಲೆಯಲ್ಲಿ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ರಾಷ್ಟ್ರದ ಇತಿಹಾಸದಲ್ಲಿಯೇ 13 ತಿಂಗಳಲ್ಲಿ ಹಾಸನ-ಮೈಸೂರು ರೈಲ್ವೆ ಯೋಜನೆ ಮಾಡಿದ್ದು ಸಚಿವ ಹೆಚ್.ಡಿ.ರೇವಣ್ಣರ ಸಾಧನೆ. ಇತ್ತ ನಮ್ಮ ಮುಖ್ಯಮಂತ್ರಿಗಳು ತಾಳ್ಮೆ ಹೊಂದಿದ್ದು, ಎಲ್ಲವನ್ನು ಸಹಿಸಿಕೊಳ್ಳುತ್ತಾರೆ. 2009ರಿಂದ 2018 ರವರೆಗೆ ರೈತರ ಸಾಲಮನ್ನಾ ಮಾಡುವ ಹೊಣೆ ತೆಗೆದುಕೊಂಡ ಕೆಲಸ ಮಾಡುತ್ತಿದ್ದಾರೆ. ರೈತನ ಮಗನಾಗಿ ಸಿಎಂ ನಾಡಿನ ರೈತ ಬಂಧುಗಳ ಸಾಲಮನ್ನಾ ಮಾಡಿದ್ದಾರೆ ಎಂದು ಇಬ್ಬರು ಮಕ್ಕಳ ಕೆಲಸವನ್ನು ದೇವೇಗೌಡರು ಹಾಡಿ ಹೊಗಳಿದರು.
ಮಾಜಿ ಸಿಎಂ ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ತರಾತುರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇ ಒಂದು ದೊಡ್ಡ ದುರಂತ. ಅಂದು ಬಿಜೆಪಿಗೆ ಬಹುಮತ ಇಲ್ಲದೇ ಇದ್ದರೂ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನವರಿಗೂ ಕೂಡ ಹೀಗೇ ಆಗಿತ್ತು. ಅಂದು ವಾಜಪೇಯಿ ಅವರು ಒಂದೂ ಕ್ಷಣ ಕೂಡ ಸದನವನ್ನು ಅಡ್ಡಿಪಡಿಸಲಿಲ್ಲ. ಅಂತಹ ಪಕ್ಷದ ಯಡಿಯೂರಪ್ಪನವರು ಕೊಂಚ ತಿದ್ದಿಕೊಳ್ಳಬೇಕು ಎಂದು ದೇವೇಗೌಡರು ಸಲಹೆ ನೀಡಿದರು.
ಈ ಹಿಂದೆ ಸಚಿವ ಡಿ.ಕೆ.ಶಿವಕುಮಾರ್ ನಾವು ರಾಜಕಕೀಯವಾಗಿ ಜಗಳ ಮಾಡಿಕೊಂಡಿದ್ದೇವೆ. ಆದ್ರೆ ಇಂದಿನ ರಾಜಕೀಯದ ಪರಿಸ್ಥಿತಿ ಅನುಗುಣವಾಗಿ ನಾವೆಲ್ಲರೂ ಒಂದಾಗಿದ್ದೇವೆ. ಈ ದೇಶದಲ್ಲಿರುವ ರಾಜಕೀಯ ಪರಿಸ್ಥಿತಿಗೆ ಅನಿವಾರ್ಯವಾಗಿ ಒಂದಾಗಿದ್ದೇವೆ. ಕಾಂಗ್ರೆಸ್‍ನಲ್ಲಿ ಸಣ್ಣ ಪುಟ್ಟ ದೋಷಗಳು ಇರಬಹುದು. ಶಾಸಕರು ತಮ್ಮ ನೋವನ್ನು ಹೇಳಿಕೊಳ್ಳಬಹುದು. ಅದನ್ನು ಅವರ ಪಕ್ಷದಲ್ಲಿ ಹೇಳಿಕೊಳ್ಳುತ್ತಿದ್ದು, ಸರಿಪಡಿಸಿಕೊಳ್ಳುವ ಶಕ್ತಿ 130 ವರ್ಷ ಇತಿಹಾಸದ ಕಾಂಗ್ರೆಸ್ ಗೆ ಇದೆ ಅಂತಾ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv