ಬೆಂಗಳೂರು: ಮೈತ್ರಿ ಸರ್ಕಾರದ ಅಧಿಕಾರ ಕಳೆದುಕೊಂಡಂತೆ ಕುಮಾರಸ್ವಾಮಿ ಅವರು ಬದಲಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಕೆಲವರು ಅಸಮಾಧಾನ ವ್ಯಕ್ತಪಡಿಸಿ ಟೀಕೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಅವರ ನಡೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಕೆಲವರು ಅಧಿಕಾರ ಕಳೆದುಕೊಂಡಂತೆ ಬದಲಾಗಿದ್ದಾರೆ ಎಂದು ದೂರುತ್ತಿದ್ದಾರೆ.
ಮೈತ್ರಿ ಸರ್ಕಾರದ ಅವಧಿಯಲ್ಲಿ ಅದರಲ್ಲೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಸಿದ್ದರಾಮಣ್ಣ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲರೊಂದಿಗೆ ಹಲವು ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳುತ್ತಿದ್ದರು. ಆದರೆ ಇಂದು ಸದನದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಸಿದ್ರಾಮಯ್ಯನವರು ಹೇಳಿದಂತೆ ರಾಜ್ಯದಲ್ಲಿ ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದಿರಲಿಲ್ಲ ಎಂದು ಹೇಳಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಎಚ್‍ಡಿಕೆಯನ್ನು ಪ್ರಶ್ನಿಸುತ್ತಿದ್ದಾರೆ.
ಕುಮಾರಸ್ವಾಮಿ ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿರುವ ಕೆಲವರು, ಇಷ್ಟು ದಿನ ಕುಮಾರಸ್ವಾಮಿ ಅವರು ಸಿದ್ರಾಮಣ್ಣ ಎನ್ನುತ್ತಿದ್ದರು, ಆದರೆ ಇಂದು ಸಿದ್ದರಾಮಯ್ಯ ಎನ್ನುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅಪ್ಪ, ಮಕ್ಕಳ ರಾಜಕೀಯ ಇಷ್ಟೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತ ಸಾಕಷ್ಟು ಪೋಸ್ಟ್‍ಗಳು ಸಾಮಾಜಿಕ ಜಾಲತಾಣ, ವಾಟ್ಸಾಪ್ ಗಳಲ್ಲಿ ವೈರಲ್ ಆಗಿದೆ.