ಚಾಮರಾಜನಗರ: ಜಿಲ್ಲೆಯಲ್ಲಿ 8 ಶತಮಾನಗಳ ಹಿಂದೆ ಸಮಾನತೆ ಸಾರಿದ ಮಹಾಪುರುಷರ ಐತಿಹಾಸಿಕ ಜಾತ್ರೆ ನಡೆಯುತ್ತದೆ. ಶತಮಾನಗಳ ಹಿಂದೆ ಸಮಾಜದಲ್ಲಿ ಇದ್ದ ಮೇಲು ಕೀಳು, ಆಹಾರ ಪದ್ಧತಿಯ ತಾರಮ್ಯದ ವಿರುದ್ಧ ಸಿಡಿದೆದ್ದು ಪಂಕ್ತಿ ಭೋಜನದ ಮೂಲಕ ನಾವೆಲ್ಲರೂ ಮನುಷ್ಯರು ಎಂದು ಸಂತರು ಸಾರಿ ಹೇಳಿದ್ದರು. ಪ್ರತಿ ವರ್ಷಕ್ಕೊಮ್ಮೆ 5 ದಿನಗಳ ಕಾಲ ಲಕ್ಷಾಂತರ ಮಂದಿ ಸೇರಿ ವಿಜೃಂಭಣೆಯಿಂದ ಮಹಾಪುರುಷರ ಹೆಸರಿನಲ್ಲಿ ಜಿಲ್ಲೆಯಲ್ಲಿ ಜಾತ್ರೆ ಮಾಡಿಕೊಂಡು ಬರುತ್ತಿದ್ದಾರೆ. ಜಾತ್ರೆ ಆರಂಭದ ನಾಲ್ಕನೇ ದಿನ ನಡೆಯುವ ಪಂಕ್ತಿ ಸೇವೆಗೆ ಲಕ್ಷಾಂತರ ಮಂದಿ ಭಾಗವಹಿಸುತ್ತಿದ್ದರು. ಆದರೆ ಜಿಲ್ಲಾಡಳಿತ ಭಕ್ತರ ಆಚರಣೆಗೆ ಕೊಡಲಿ ಪೆಟ್ಟು ನೀಡಿದ ಪರಿಣಾಮ ಬರುವ ಭಕ್ತರಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ.
Advertisement
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಸಿದ್ದಾಪ್ಪಾಜಿ ಜಾತ್ರೆ ಪ್ರತಿ ವರ್ಷ ಮೊದಲನೇ ಹುಣ್ಣಿಮೆಯಂದು ಆರಂಭವಾಗುತ್ತದೆ. ಜಾನಪದ ಗ್ರಂಥಗಳ ದಾಖಲೆ ಪ್ರಕಾರ, 8 ಶತಮಾನಗಳಿಂದ ಜಾತ್ರೆ ನಡೆಯುತ್ತಾ ಬಂದಿದೆ. ಹುಣ್ಣಿಮೆಯಂದು ಆರಂಭವಾಗುವ ಜಾತ್ರೆ ಐದು ದಿನಗಳ ಕಾಲ ನಡೆಯುತ್ತದೆ. ಜಾತ್ರೆಗೆ ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಬಂದ ಭಕ್ತರು ದೇವಾಲಯದ ಆವರಣ ಇಲ್ಲವೇ ಸುತ್ತಮುತ್ತಲ ಖಾಸಗಿ ಜಾಗದಲ್ಲಿ ಬಿಡಾರ ಹೂಡಿ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.
Advertisement
ದೂರದ ಊರಿನಿಂದ ಜಾತ್ರೆಗೆ ಬಂದ ಜನರು ಪವಾಡ ಪುರುಷ ಸಿದ್ದಾಪ್ಪಾಜಿಯ ಕಂಡಾಯ ಇಟ್ಟು ಪೂಜೆ ಸಲ್ಲಿಸುತ್ತಾರೆ. ಸುಗ್ಗಿಯ ನಂತರ ಬರುವ ಜಾತ್ರೆಯಲ್ಲಿ ಈ ಭಾಗದ ಜನರು ಸಡಗರ ಸಂಭ್ರದಿಂದ ಪಾಲ್ಗೊಳ್ಳುತ್ತಾರೆ. ಈ ಜಾತ್ರೆಯಲ್ಲಿ ನಾಲ್ಕನೇ ದಿನ ನಡೆಯುವ ಪಂಕ್ತಿ ಸೇವೆ ಹೆಚ್ಚು ಆಕರ್ಷಣೀಯ ಮತ್ತು ಪ್ರಸಿದ್ಧಿ ಪಡೆದಿದೆ. ಹರಕೆ ಹೊತ್ತ ಭಕ್ತರು ಕುರಿ, ಕೋಳಿಗಳನ್ನ ಬಲಿ ಕೊಡುತ್ತಾರೆ. ಆದರೆ ಸಿದ್ದಪ್ಪಾಜೀ ದೇವಾಲಯ ಮುಂಭಾಗ ಯಾವುದೇ ಬಲಿ ಪೀಠ ಇಲ್ಲ. ಹೀಗಾಗಿ ನೀಲಗಾರ ಸಿದ್ದಪ್ಪಾಜಿಯ ತೀರ್ಥ ತಂದು ಕುರಿ ಕೋಳಿಗಳಿಗೆ ಸಿಂಪಡಿಸಿ ನಂತರ ದೇವರ ಹೆಸರಿನಲ್ಲಿ ತಾವು ಹಾಕಿದ್ದ ಬಿಡಾರದ ಬಳಿ ಪ್ರಾಣಿಗಳನ್ನ ಭಕ್ತರು ಬಲಿಕೊಡುತ್ತಾರೆ.
Advertisement
Advertisement
ನಂತರ ಆದೇ ಮಾಂಸದಿಂದ ಬಗೆ ಬಗೆಯ ಅಡುಗೆ ತಯಾರಿಸಿ ಬರುವ ಭಕ್ತರಿಗೆ ಜಾತಿ ಬೇಧ ಇಲ್ಲದೆ ಊಟ ಬಡಿಸುವುದೇ ಪಂಕ್ತಿ ಸೇವೆ. ಪಂಕ್ತಿ ಸೇವೆಗೆ ಪ್ರಾಣಿ ಬಲಿ ಕೊಡಲಾಗುತ್ತಿದೆ ಎಂದು ಪ್ರಾಣಿ ದಯಾ ಕಲ್ಯಾಣ ಸಮಿತಿ ಆರೋಪಿಸಿ ನ್ಯಾಯಾಲದ ಮೆಟ್ಟಿಲೇರಿತ್ತು. ಆ ನಂತರ ಮಧ್ಯಂತರ ಆದೇಶ ಹೊರಡಿಸಿದ್ದ ಹೈಕೋರ್ಟ್ ಭಕ್ತರಿಗೆ ಪಂಕ್ತಿ ಸೇವೆಗೆ ಅಡಚಣೆ ಮಾಡದೇ ಕರ್ನಾಟಕ ಪ್ರಾಣಿ ಬಲಿ ಕಾಯ್ದೆ ಉಲ್ಲಂಘನೆ ಮಾಡದಂತೆ ಜಾತ್ರೆ ನಡೆಸಿ ಎಂದು ಆದೇಶ ನೀಡಿತ್ತು. ಹೀಗಾಗಿ ಜಿಲ್ಲಾಡಳಿತ ಪ್ರಾಣಿ ಬಲಿ ತಡೆಗೆ ಕಳೆದ 3 ವರ್ಷಗಳಿಂದ ಕ್ರಮ ತೆಗೆದುಕೊಂಡಿತ್ತು. ಆದರೆ ಅಧಿಕಾರಿಗಳು ಕಾನೂನು ಪಾಲನೆ ನೆಪದಲ್ಲಿ ಭಕ್ತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಭಕ್ತರ ಆರೋಪಿಸುತ್ತಿದ್ದಾರೆ. ನಾವು ಕಷ್ಟ ಸುಖದ ಸಂದರ್ಭದಲ್ಲಿ ದೇವರಿಗೆ ಹರಕೆ ಹೊತ್ತುಕೊಂಡಿರುತ್ತೇವೆ. ಹರಕೆಯ ಸಂದರ್ಭದಲ್ಲಿ ಬಂದು ಬಳಗವನ್ನ ಕರೆದುಕೊಂಡು ಹಬ್ಬ ಆಚರಿಸುತ್ತೇವೆ. ಆದರೆ ಪೊಲೀಸರು ತಾವು ತಂದಿದ್ದ ಕುರಿ ಕೋಳಿಗಳನ್ನ ವಶಪಡಿಸಿಕೊಂಡು ನಮಗೆ ಕಿರುಕುಳ ನೀಡುತ್ದಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಜಾತ್ರೆಯಲ್ಲಿ ಭಾಗವಹಿಸುವವರೇಲ್ಲ ಬಹುತೇಕ ರೈತರು. ಇಲ್ಲಿ ಹುಣ್ಣಿಮೆ ದಿನದಂದು ಚಂದ್ರ ಮಂಡಲೋತ್ಸವ ನಡೆಯುತ್ತದೆ. ಈ ವೇಳೆ ಚಂದ್ರ ಮಂಡಲಕ್ಕೆ ಬೆಂಕಿ ಹಾಕಿದ ವೇಳೆ ಬೆಂಕಿಯ ಜ್ವಾಲೆ ಯಾವ ದಿಕ್ಕಿಗೆ ವಾಲುತ್ತದೆ ಆ ದಿಕ್ಕಿನಲ್ಲಿ ಸಮೃದ್ಧಿಯಾಗಿ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಹೀಗಾಗಿ ಈ ಕುತೂಹಲ ವೀಕ್ಷಣೆ ಮಾಡಲು ಸಾಗರೋಪಾದಿಯಲ್ಲಿ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೋಳ್ಳುತ್ತಾರೆ.
12ನೇ ಶತಮಾನದಲ್ಲಿ ಇದ್ದ ಜಾತಿ ಪದ್ಧತಿ, ಪಂಕ್ತಿ ಸೇವೆ ತಾರತಮ್ಯಗಳ ವಿರುದ್ಧ ಹೋರಾಟ ಮಾಡಿದ ರಾಚಪ್ಪಜೀ ಅವರು ಉತ್ತರದಿಂದ ದಕ್ಷಿಣಾಭಿಮುಕವಾಗಿ ಬಂದರು. ಅವರ ಶಿಷ್ಯರೇ ನೀಲಗಾರ ಸಿದ್ದಪ್ಪಾಜಿ. ಜಾತಿ ಭೇದ ದಿಕ್ಕರಿಸಿ ಎಲ್ಲರೂ ಸಹಪಂಕ್ತಿಯಲ್ಲಿ ಊಟ ಮಾಡಬೇಕು ಎಂಬ ಕಲ್ಪನೆಯೊಂದಿಗೆ ಚಿಕ್ಕಲ್ಲೂರಿನಲ್ಲಿ ಸಿದ್ದಪ್ಪಾಜಿ ನೆಲೆಸಿದರು. ಅವರು ಐಕ್ಯವಾದ ನಂತರ ವರ್ಷದ ಮೊದಲ ಹುಣ್ಣಿಮೆ ದಿನದಿಂದ ಐದು ದಿನಗಳ ಕಾಲ ಜಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಭಕ್ತರ ಹರಕೆಗೆ ತಡೆಯೊಡ್ಡಿದ್ದರಿಂದ ಕಳೆದ 4 ವರ್ಷಗಳಿಂದ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಹೀಗೆ ಮುಂದುವರಿದರೆ ಜಾತ್ರೆಯ ಜನಪ್ರಿಯತೆ ಕುಗ್ಗಲಿದೆ ಎಂದು ಅರ್ಚಕರು ಹೇಳಿದರು.
ಐತಿಹಾಸಿಕ ಪ್ರಸಿದ್ಧಿ ಗಳಿಸಿರುವ ಸಿದ್ದಪ್ಪಾಜೀ ಜಾತ್ರೆಯಲ್ಲಿನ ಪಂಕ್ತಿ ಸೇವೆ ಸ್ಥಗಿತಗೊಳಿಸಿರುವುದರಿಂದ ಜಾತ್ರೆಯ ಜನಪ್ರಿಯತೆ ದಿನದಿಂದ ದಿನಕ್ಕೆ ಕಳೆಗುಂದುವಂತೆ ಮಾಡಿದೆ. ಜಾತ್ರೆ ವೇಳೆ ಮಾತ್ರ ಪ್ರಾಣಿ ವಧೆಗೆ ನಿರ್ಬಂಧ ಹೇರುವ ಜಿಲ್ಲಾಡಳಿತ ನಂತ್ರ ದಿನಗಳಲ್ಲಿ ಏಕೆ ತಾರತಮ್ಯ ಮಾಡುತ್ತಿದೆ ಎಂಬುದು ಭಕ್ತರ ಪ್ರಶ್ನೆಯಾಗಿದೆ. ಬರುವ ದಿನಗಳಲ್ಲಿ ಜಿಲ್ಲಾಡಳಿತ ಗೊಂದಲ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಭಕ್ತರ ಆಗ್ರಹವಾಗಿದೆ. ಜೊತೆಗೆ ಕರಗದ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ವಸೂಲಿಗೆ ಬರುತ್ತಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಬ್ರೇಕ್ ಹಾಕಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.