ಚಾಮರಾಜನಗರ: ಯಾವುದೇ ಕಾರಣಕ್ಕೂ ಪ್ರಮೋದಾದೇವಿ ಒಡೆಯರ್ ಅವರಿಗೆ ನಮ್ಮ ಗ್ರಾಮವನ್ನು ರಿಜಿಸ್ಟರ್ ಮಾಡಿಕೊಡಬೇಡಿ ಎಂದು ಜಿಲ್ಲಾಧಿಕಾರಿಗೆ ಸಿದ್ದಯ್ಯನಪುರ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ರಾಜಮನೆತನಕ್ಕೆ ಸೇರಿದ 4,500 ಎಕರೆ ಜಾಗವನ್ನು ರಿಜಿಸ್ಟರ್ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪತ್ರ ಬರೆದಿದ್ದರು. ಈ ವಿಚಾರವಾಗಿ ಸಿದ್ದಯ್ಯನಪುರ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಗ್ರಾಮಸ್ಥರು ಕೂಡ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ, ಯಾವುದೇ ಕಾರಣಕ್ಕೂ ಪ್ರಮೋದಾದೇವಿ ಅವರ ಹೆಸರಿಗೆ ನಮ್ಮ ಗ್ರಾಮವನ್ನು ರಿಜಿಸ್ಟರ್ ಮಾಡಿಕೊಡಬೇಡಿ. ಸಾಕಷ್ಟು ವರ್ಷಗಳಿಂದ ನಾವು ಸಿದ್ದಯ್ಯನಪುರ ಗ್ರಾಮದಲ್ಲಿ ವಾಸವಾಗಿದ್ದೇವೆ. ಈಗ ಏಕಾಏಕಿ ಬಂದು ಅವರ ಜಾಗ ವಾಪಸ್ ಕೇಳಿದ್ರೆ, ಮಕ್ಕಳನ್ನು ಕಟ್ಟಿಕೊಂಡು ನಾವು ಎಲ್ಲಿಗೆ ಹೋಗುವುದು ಎಂದು ಪ್ರಶ್ನಿಸಿದ್ದಾರೆ.
ಜಯಚಾಮರಾಜೇಂದ್ರ ಒಡೆಯರ್ ಅವರು ಆಗ ನಮಗೆ ದಾನವಾಗಿ ನೀಡಿದ ಜಾಗವದು. ಈಗ ಕಂದಾಯ ಗ್ರಾಮ ಮಾಡಲಾಗುವುದು ಎಂದು ಹೇಳಿದ ತಕ್ಷಣ ಪ್ರಮೋದಾ ದೇವಿಯವರು ಈ ರೀತಿ ಮಾಡುತ್ತಿದ್ದಾರೆ. ದಯಮಾಡಿ ನಮ್ಮ ಗ್ರಾಮವನ್ನ ಉಳಿಸಿಕೊಡಿ ಎಂದು ಡಿಸಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.