ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಅಸ್ವಸ್ಥಗೊಂಡು ಹಾರಲು ಸಾಧ್ಯವಾಗದೇ ಕೊಕ್ಕರೆಗಳು ನೆಲಕ್ಕೆ ಬೀಳುತ್ತಿದ್ದು, ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.
ಕೊಕ್ಕರೆ ಬೆಳ್ಳೂರು ಗ್ರಾಮಕ್ಕೆ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ದೇಶ, ವಿದೇಶಗಳಿಂದ ವಿವಿಧ ಜಾತಿಗೆ ಸೇರಿದ ಕೊಕ್ಕರೆಗಳು ವಲಸೆ ಬರುತ್ತವೆ. ನಂತರ ಇಲ್ಲಿ ಬಂದು ನೆಲೆಸಿ ಸಂತಾನೋತ್ಪತ್ತಿ ಮಾಡಿ ಜೂನ್, ಜುಲೈ ತಿಂಗಳಲ್ಲಿ ವಾಪಸ್ ಹೋಗುತ್ತವೆ. ಆದರೆ ಈ ಬಾರಿ ವಲಸೆ ಬಂದಿರುವ ಕೊಕ್ಕರೆಗಳು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಂಕಟ ಪಡುತ್ತಿದ್ದು, ಹಾರಲಾರದೇ ನೆಲಕ್ಕೆ ಬೀಳುತ್ತಿವೆ.
Advertisement
Advertisement
ಇದನ್ನು ಗಮನಿಸಿದ ಗ್ರಾಮಸ್ಥರು ಪಕ್ಷಿಗಳಿಗೆ ತಮ್ಮ ಕೈಲಾದ ಆರೈಕೆ ಮಾಡುತ್ತಿದ್ದಾರೆ. ವಿಷಯ ತಿಳಿದು ವೈದ್ಯರು ಸ್ಥಳಕ್ಕೆ ಧಾವಿಸಿ ಪಕ್ಷಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಈಗಾಗಲೇ ಸುಮಾರು ಮೂರು ಪಕ್ಷಿಗಳು ಅನಾರೋಗ್ಯಕ್ಕೀಡಾಗಿದ್ದು, ಅದರಲ್ಲಿ ಒಂದು ಪಕ್ಷಿ ಸಾವನ್ನಪ್ಪಿದೆ.
Advertisement
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲೇ ಪಕ್ಷಿಗಳು ಅನಾರೋಗ್ಯಕ್ಕೆ ತ್ತುತ್ತಾಗಿ ಆತಂಕಕ್ಕೆ ಕಾರಣವಾಗಿತ್ತು. ಈಗ ಮತ್ತೆ ಪಕ್ಷಿಗಳ ಅನಾರೋಗ್ಯ ಮರುಕಳಿಸಿದೆ. ಕಳೆದ ವರ್ಷ ಮೈಸೂರು ಸೇರಿದಂತೆ ಹಲವೆಡೆ ಪಕ್ಷಿಗಳ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈಗಾಗಲೇ ಮೃತಪಟ್ಟ ಪಕ್ಷಿಯನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು ಅಸ್ವಸ್ಥಕ್ಕೆ ನಿಖರ ಕಾರಣ ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
Advertisement
ಕಳೆದ ವರ್ಷ ಕೂಡ ಇದೇ ರೀತಿ ಐದಕ್ಕೂ ಹೆಚ್ಚು ಕೊಕ್ಕರೆ ಸಾವನ್ನಪ್ಪಿದ್ದವು. ಈ ಬಾರಿಯೂ ಪ್ರಾರಂಭದಲ್ಲಿಯೇ ಕೊಕ್ಕರೆ ಅನಾರೋಗ್ಯಕ್ಕೆ ತುತ್ತಾಗಿರುವುರಿಂದ ನಾವು ಪಕ್ಷಿಗಳ ತಪಾಸಣೆ ನಡೆಸಿದ್ದೇವೆ. ಒಂದು ವೇಳೆ ಮತ್ತೆ ಪಕ್ಷಿಗಳು ಅನಾರೋಗ್ಯಕ್ಕೆ ತುತ್ತಾದ್ರೆ ಪ್ರಯೋಗಾಲಯದಲ್ಲಿ ಪರಿಶೀಲಿಸಿ, ನಂತರ ಅಲ್ಲಿಂದ ವರದಿ ತರಿಸಿಕೊಂಡು ಚಿಕಿತ್ಸೆ ಕೊಡುತ್ತೇವೆ ಎಂದು ಡಾ. ಸತೀಶ್ ತಿಳಿಸಿದ್ದಾರೆ.
ತಕ್ಷಣ ಪಕ್ಷಿಗಳು ಅಸ್ವಸ್ಥಗೊಳ್ಳುತ್ತಿರುವುದಕ್ಕೆ ಶೀಘ್ರವೇ ಕಾರಣ ಹುಡುಕಿ ಮುಂದೆ ಯಾವುದೇ ಪಕ್ಷಿಗಳಿಗೂ ತೊಂದರೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಪಕ್ಷಿ ಪ್ರಿಯರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.