ಅಹಮದಾಬಾದ್: ಗುಜರಾತ್ ಚುನಾವಣಾ ಫಲಿತಾಂಶ ಹೊರಬಂದಿದ್ದು, ಬಿಜೆಪಿಯ ಭದ್ರ ಕೋಟೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದಕ್ಕಿಂತ ಮುಂಚೆ ಪ್ರತಿನಿಧಿಸುತ್ತಿದ್ದ ಮಣಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶ್ವೇತಾ ಬ್ರಹ್ಮಭಟ್ ಸೋಲನುಭವಿಸಿದ್ದಾರೆ.
ಮಣಿನಗರ ಕ್ಷೇತ್ರದಿಂದ ಬಿಜೆಪಿಯ ಹಾಲಿ ಶಾಸಕ ಹಾಗೂ ಪ್ರಧಾನಿ ಪಕ್ಕಾ ಶಿಷ್ಯ ಸುರೇಶ್ ಪಟೇಲ್ ಮತ್ತು ಕಾಂಗ್ರೆಸ್ ನ ಐಐಎಂ ಪದವೀಧರೆ ಶ್ವೇತಾ ಬ್ರಹ್ಮಭಟ್ ಸ್ಪರ್ಧಿಸಿದ್ದರು. ಚುನಾವಣಾ ಫಲಿತಾಂಶದಲ್ಲಿ ಇವರಿಬ್ಬರ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಸುಮಾರು 75,199 ಮತಗಳ ಅಂತರದಿಂದ ಶ್ವೇತಾ ಸೋತಿದ್ದಾರೆ. ಸುರೇಶ್ ಪಟೇಲ್ ಪರ 1,16,113 ಮತಗಳು ಬಿದ್ದರೆ, ಶ್ವೇತಾ ಅವರು 40,914 ಮತಗಳನ್ನು ಪಡೆದಿದ್ದಾರೆ.
Advertisement
Advertisement
ಯಾರಿದು ಶ್ವೇತಾ ಭಟ್?: ಕಾಂಗ್ರೆಸ್ ನಾಯಕ ನರೇಶ್ ಬ್ರಹ್ಮಭಟ್ ಅವರ ಪುತ್ರಿಯಾಗಿರುವ 34 ವರ್ಷದ ಶ್ವೇತಾ ಬ್ರಹ್ಮಭಟ್ ಅವರು ಬೆಂಗಳೂರಿನಲ್ಲಿ ಐಐಎಂ ಮತ್ತು ಲಂಡನ್ ನಲ್ಲಿ ಪದವಿ ಪಡೆದಿದ್ದು, ಮಣಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.
Advertisement
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿಯಾಗಿರುವ ಮಣಿನಗರ ಕ್ಷೇತ್ರದಿಂದ ನರೇಂದ್ರ ಮೋದಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮೋದಿ ಕ್ಷೇತ್ರ ಹಾಗೂ ಅಹಮದಾಬಾದ್‍ನ 16 ಕ್ಷೇತ್ರಗಳ ಪೈಕಿ ಶ್ವೇತಾ ಅವರು ಒಬ್ಬರೇ ಮಹಿಳಾ ಅಭ್ಯರ್ಥಿಯಾಗಿರುವುದರಿಂದ ಈ ಕ್ಷೇತ್ರದಲ್ಲಿ ಈ ಬಾರಿ ಮತ್ತಷ್ಟು ಕುತೂಹಲ ಹೆಚ್ಚಿತ್ತು.
Advertisement
ಇನ್ನು ನೋಟ್ ನಿಷೇಧ ಹಾಗೂ ಜಿಎಸ್ ಟಿ ಜಾರಿಯಾದ ಬಳಿಕ ಮೋದಿ ಕ್ಷೇತ್ರದಲ್ಲಿ ಇದು ಮೊದಲ ಚುನಾವಣೆಯಾಗಿದೆ. ಇನ್ನು ವ್ಯಾಪಾರಿಗಳೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಜಿಎಸ್ ಟಿ ಜಾರಿ ಹಾಗೂ ನೋಟ್ ನಿಷೇಧದ ಬಳಿಕ ಇಲ್ಲಿನ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಗೂ ಇದು ಸವಾಲಿನ ಕ್ಷೇತ್ರವಾಗಿ ಪರಿಣಿಮಿಸಿತ್ತು.
`ನಾನು ರಾಜಕೀಯವನ್ನು ಬಹಳ ದಿನಗಳಿಂದಲೂ ನೋಡುತ್ತಿದ್ದೇನೆ. ರಾಜಕೀಯ ಒಂದು ಸಾಮಾಜಿಕ ಕಾರ್ಯ ಎಂದು ಪರಿಗಣಿಸಿದ್ದೇನೆ. ವ್ಯಾಪಾರ ಅಥವಾ ಉದ್ಯಮ ನನ್ನ ಕ್ಷೇತ್ರವಾಗಿರಲಿಲ್ಲ. ಆದರೆ ನಾನು ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಪದವಿ ಪಡೆದುಕೊಂಡ ನಂತರವೂ ನನಗೆ ಉದ್ಯಮ ಆರಂಭಿಸಲು ಅಗತ್ಯವಾದ ಹಣಕಾಸಿನ ಸೌಲಭ್ಯ ಸಿಗಲಿಲ್ಲ. ನನ್ನಂತವರಿಗೆ ಹೀಗಾದರೆ ಇನ್ನು ಜನ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದ್ದರು. ಅಲ್ಲದೇ ಮಹಿಳೆಯರಿಗೆ ಮತ್ತು ಯುವಕರಿಗೆ ಧ್ವನಿಯಾಗಬೇಕು ಎಂಬ ಉದ್ದೇಶದಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿ ಶ್ವೇತಾ ಮಾಧ್ಯಮಕ್ಕೆ ಅಂದು ಪ್ರತಿಕ್ರಿಯಿಸಿದ್ದರು.