ಬಾಗಲಕೋಟೆ: ನಾವು ಪ್ರತಿಭಟನೆ ಮಾಡಿಲ್ಲ, ಚುನಾವಣಾ ಆಯೋಗಕ್ಕೆ (Election Commission) ದೂರು ಹಾಗೂ ಮನವಿ ಸಲ್ಲಿಸಲು ಹೋಗಿದ್ದೆವು. ದೂರು ಕೊಡಲು ಕಚೇರಿಗೆ ಹೋಗಬೇಕೋ ಅಥವಾ ಫ್ರೀಡಂ ಪಾರ್ಕ್‌ಗೆ ಹೋಗಬೇಕೋ ಎಂದು ಪಕ್ಷದ ನಡೆಯನ್ನು ಸಚಿವ ಕಾಶಪ್ಪನವರ್(Vijayanand Kashappanavar) ಸಮರ್ಥಿಸಿಕೊಂಡಿದ್ದಾರೆ.
ಚುನಾವಣಾ ಆಯೋಗದ ಕಚೇರಿ ಬಳಿ ಕಾಂಗ್ರೆಸ್ (Congress) ನಿಯೋಗ ನಡೆಸಿದ ಭೇಟಿಯನ್ನು ಪ್ರತಿಭಟನೆ ಎಂದು ಬಿಂಬಿಸುತ್ತಿರುವ ಬಿಜೆಪಿ ನಾಯಕರ ಹೇಳಿಕೆಗೆ ಅವರು ಬೀಳಗಿಯಲ್ಲಿ ಪ್ರತಿಕ್ರಿಯೆ ನೀಡಿದರು.
ನಾವು ಎಲ್ಲಿಯೂ ಧರಣಿ ಕೂತಿಲ್ಲ, ಪ್ರತಿಭಟನೆಯನ್ನೂ ಮಾಡಿಲ್ಲ. ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸದಸ್ಯರು ಚುನಾವಣಾ ಆಯೋಗದ ಕಚೇರಿಗೆ ನಿಯಮಾನುಸಾರ ಮನವಿ ಕೊಡಲು ಹೋಗಿದ್ದೆವು. ಅಕ್ರಮದ ವಿರುದ್ಧ ಕಚೇರಿಗೆ ಹೋಗಿ ದೂರು ಕೊಡುವುದನ್ನು ಬಿಟ್ಟು ಫ್ರೀಡಂ ಪಾರ್ಕ್‌ನಲ್ಲಿ ಕೂರಲು ಸಾಧ್ಯವೇ? ಕಾನೂನನ್ನು ಉಲ್ಲಂಘಿಸಿರುವುದು ನಾವಲ್ಲ, ಬಿಜೆಪಿಯವರು ಎಂದು ದೂರಿದರು.
ಸುಮಾರು 24,000 ಎಸ್ ಐ ಆರ್ ಫಾರ್ಮ್ ನಂಬರ್ 7 ಪ್ರಿಂಟ್ ಆಗಿದೆ ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಈ ನಿಖರ ಮಾಹಿತಿ ಅವರಿಗೆ ಹೇಗೆ ತಿಳಿಯಿತು? ಚುನಾವಣಾ ಆಯೋಗದವರು ಇವರಿಗೆ ಮುಂಚಿತವಾಗಿಯೇ ಹೇಳಿದ್ದಾರೆಯೇ? ವಾಸ್ತವದಲ್ಲಿ ಇವರೇ ನಕಲಿ ಫಾರ್ಮ್‌ಗಳನ್ನು ಮುದ್ರಿಸಿಕೊಂಡಿದ್ದಾರೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದು ತಿರುಗೇಟು ನೀಡಿದರು.
ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರೇ ಸ್ವತಃ ನಕಲಿ ಫಾರ್ಮ್‌ಗಳನ್ನು ತುಂಬಿ ಪ್ರತಿ ಮತಕ್ಷೇತ್ರಕ್ಕೂ ಹಂಚಿಕೆ ಮಾಡುತ್ತಿದ್ದಾರೆ. ಇದು ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ನಾಚಿಕೆಗೇಡಿನ ಕೆಲಸ ಎಂದು ಕಿಡಿಕಾರಿದರು.
ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಕೈಬಿಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದ್ದು, 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಇವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಸಚಿವ ಕಾಶಪ್ಪನವರ ಎಚ್ಚರಿಕೆ ನೀಡಿದರು.

