ವಿಜಯಪುರ: ಕಾರಿನಲ್ಲಿ ಬರುತ್ತಿದ್ದ ಓರ್ವ ವ್ಯಕ್ತಿಯ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿ, ಬರ್ಬರ ಹತ್ಯೆಗೈದಿರುವ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ (Arakeri) ಗ್ರಾಮದ ಮನಾವರ ದೊಡ್ಡಿ ಬಳಿ ನಡೆದಿದೆ.
ಮೃತನನ್ನು ಮನಾವರ ದೊಡ್ಡಿಯ ಸತೀಶ ರಾಠೋಡ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಕೊಡಗಿನ ಕಟ್ಟೆಮಾಡು ದೇವಾಲಯದ ಅರ್ಚಕನ ಮೇಲೆ ಹಲ್ಲೆ ಕೇಸ್ – ಆರೋಪಿಗಳ ಪತ್ತೆಗೆ ತೀವ್ರ ಶೋಧ
ಮೃತ ಸತೀಶ್ ಅರಕೇರಿ ಅಮೋಘಸಿದ್ಧ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ 5 ಜನ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಕಾರಿನಲ್ಲಿದ್ದ ಸತೀಶ್ ಓಡಿ ಹೋಗುವಾಗ ಗುಂಡು ಹಾರಿಸಿದ್ದು, ಕೆಲ ಮೈಲಿ ದೂರ ಬಿದ್ದಿದ್ದಾನೆ. ಬಳಿಕ ಐವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಕುರಿತು ಸತೀಶ್ ತಂದೆ ಪ್ರೇಮಸಿಂಗ್ ಮಾತನಾಡಿ, ಮೃತ ಸತೀಶ್ ಮನೆಯ ಹತ್ತಿರದ ರಮೇಶ ಚವ್ಹಾಣ ಎಂಬುವವರ ಮಗಳನ್ನು ಪ್ರೀತಿಸುತ್ತಿದ್ದರು. ಇದನ್ನು ತಿಳಿದ ಸತೀಶ್ ತಂದೆ ಕುಟುಂಬ ಸಮೇತ ರಮೇಶ ಮನೆಗೆ ತೆರಳಿ ಇಬ್ಬರಿಗೂ ಮದುವೆ ಮಾಡಿಸುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಒಪ್ಪದ ರಮೇಶ್ ಮಗಳಿಗೆ ತಾಕೀತು ಮಾಡಿದ್ದರು. ಆದರೆ ಕಳೆದ ಒಂದು ವರ್ಷದ ಹಿಂದೆ ರಮೇಶ್ ಮಗಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅದೇ ದ್ವೇಷದಿಂದ ರಮೇಶ ಹಾಗೂ ಕೆಲವರು ಸೇರಿ ಸತೀಶ್ ಹತ್ಯೆ ಮಾಡಿದ್ದಾರೆಂದು ಆರೋಪಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಹಳೆಯ ದ್ವೇಷವೇ ಕಾರಣ ಎಂದು ಶಂಕಿಸಲಾಗಿದೆ. ಜೊತೆಗೆ ಶ್ವಾನ ದಳದಿಂದ ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ನಡೆದಿದ್ದು, ವಿಜಯಪುರ ಗ್ರಾಮೀಣ ಪೊಲೀಸರು ಬಲೆ ಬೀಸಿದ್ದಾರೆ. ಪೊಲೀಸರ ಸಂಪೂರ್ಣ ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ.ಇದನ್ನೂ ಓದಿ: ಫೆಬ್ರವರಿಗೆ ಪ್ರಧಾನಿ ಮೋದಿ ಅಮೆರಿಕಗೆ ಭೇಟಿ ಕೊಡ್ತಾರೆ: ಟ್ರಂಪ್