ಶಿವಮೊಗ್ಗ: ನಗರದಲ್ಲಿ ಹಾಡಹಗಲೇ ನಡು ರಸ್ತೆಯಲ್ಲೇ ಮರಿ ರೌಡಿ ಬಚ್ಚೇ ಆಲಿಯಾಸ್ ಇನಾಯತ್ ಎಂಬಾತನ ಬರ್ಬರ ಹತ್ಯೆಯಾಗಿದೆ. ಈತನ ತಂದೆ ಕುಖ್ಯಾತ ರೌಡಿ ನಸ್ರು ಕೂಡ ಇದೇ ರೀತಿ ನಡು ರಸ್ತೆಯಲ್ಲೇ ಅಮಾನುಷವಾಗಿ ಹತ್ಯೆಗೀಡಾಗಿದ್ದ. ಬಚ್ಚೆಯಿಂದ ತೊಂದರೆಗೆ ಒಳಗಾಗಿದ್ದ ಸೋಯಲ್, ಸಲೀಂ, ಕುರ್ರಂ, ಕೀಲಿ ಇಮ್ರಾನ್ ಗ್ಯಾಂಗು ಈ ಹತ್ಯೆ ಮಾಡಿದೆ ಎಂದು ಶಂಕಿಸಲಾಗಿದೆ.
Advertisement
ಕೇವಲ 25 ದಿನಗಳ ಹಿಂದಷ್ಟೇ ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದ ಇನಾಯತ್ ಕೊಲೆಗೆ ವಿರೋಧಿ ಗ್ಯಾಂಗ್ ಕಾದಿತ್ತು ಎನ್ನಲಾಗಿದೆ. ಬುಧವಾರ ಸಂಜೆ ಆಯನೂರು ಗೇಟ್ ಕಡೆಯಿಂದ ಬೈಕಿನಲ್ಲಿ ಬಂದ ಇನಾಯತ್‍ನನ್ನು ಈ ಗ್ಯಾಂಗ್ ಫಾಲೋ ಮಾಡಿದೆ. ಅಣ್ಣಾ ನಗರದ ನಾಲ್ಕನೇ ತಿರುವಿನಲ್ಲಿ ಇರುವ ಕ್ಯಾಂಟೀನ್ ಬಳಿ ಇನಾಯತ್ ಬೈಕ್ ನಿಲ್ಲಿಸಿ ಇಳಿಯುತ್ತಿದ್ದಂತೆ ಹಿಂದಿನಿಂದ ಬಂದ ಆರು ಮಂದಿ ತಂಡ ಏಕಾಏಕಿ ದಾಳಿ ಮಾಡಿದೆ. ನಡುರಸ್ತೆಯಲ್ಲೇ ಲಾಂಗ್, ಡ್ರ್ಯಾಗರ್, ಚೂರಿಯಿಂದ ತೀವ್ರವಾಗಿ ಹಲ್ಲೆ ಮಾಡಿದೆ. ಇನ್ನೂ ಇನಾಯತ್ ಬದುಕುಳಿಯಲಾರ ಎಂಬುದು ಖಚಿತವಾಗುತ್ತಿದ್ದಂತೆ ತಂಡ ಅಲ್ಲಿಂದ ಕಾಲ್ಕಿತ್ತಿದೆ. ನಡುರಸ್ತೆಯಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Advertisement
Advertisement
ಕಳೆದ ಅಕ್ಟೋಬರ್‍ನಲ್ಲಿ ಇದೇ ಇನಾಯತ್ ಶಿವಮೊಗ್ಗದ ಮಾಜಿ ರೌಡಿ ದಾಡಿ ಬಶೀರ್ ಎಂಬಾತನ ಹಣೆಗೆ ರಿವಾಲ್ವಾರ್ ಇಟ್ಟು ಒಂದು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅಲ್ಲದೆ, ನಗರದ ಹಲವೆಡೆ ಇದೇ ರಿವಾಲ್ವಾರ್ ಹಿಡಿದು ಹಲವರನ್ನು ಬೆದರಿಸಿದ್ದ. ದೊಡ್ಡ ಗ್ಯಾಂಗ್ ಸ್ಟಾರ್ ನಾನು ಎಂಬ ಭ್ರಮೆಯಲ್ಲಿ ಬೈಕ್‍ಗೆ ಬೆಂಕಿ ಹಚ್ಚಿದ್ದ, ಮೀಸೆ ಮೂಡದ ಹುಡುಗರ ಕಟ್ಟಿಕೊಂಡು ಗಾಂಜಾ ವಹಿವಾಟನ್ನೂ ಮಾಡುತ್ತಿದ್ದ. ಇದೇ ವಿಷಯವಾಗಿ ಇಮ್ರಾನ್, ಕುರ್ರಂ ಇನ್ನಿತರರ ಜೊತೆ ದ್ವೇಷ ಕಟ್ಟಿಕೊಂಡಿದ್ದ. ದೂರುಗಳು ಹೆಚ್ಚಾದಂತೆ ಪೊಲೀಸರು ಬಚ್ಚೇ ಹಾಗೂ ಈತನ ಗ್ಯಾಂಗ್‍ನ 13 ಜನರನ್ನು ಬಂಧಿಸಿ ಜೈಲಿಗಟ್ಟಿದ್ದರು.
Advertisement
ಮುಖ್ಯವಾಗಿ ತನ್ನ ತಂದೆ ಕೊಲೆಗೆ ದಾಡಿ ಬಶೀರ್ ಕಾರಣ ಎಂದು ನಂಬಿದ್ದ ಬಚ್ಚೆ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಹೇಳಿದ್ದ. ಇದೂ ಸೇರಿದಂತೆ ಶಿವಮೊಗ್ಗದಲ್ಲಿ ಕೆಲ ಕುಟುಂಬಗಳ ನಡುವೆ ಇರುವ ವೈಷ್ಯಮ್ಯ ಗ್ಯಾಂಗ್ ವಾರ್‍ಗಳಿಗೆ ಕಾರಣವಾಗುತ್ತಿದೆ. ರಾಜಕಾರಣಿಗಳ ಕೃಪಾಕಟಾಕ್ಷ, ಕುಟುಂಬಗಳ ಹಗೆತನ, ಇದರೊಂದಿಗೆ ಗಾಂಜಾ ವಹಿವಾಟು ನಿಯಂತ್ರಣಕ್ಕೆ ಮುಂದಾಗದ ಪೊಲೀಸರ ನಿರ್ಲಕ್ಷ್ಯವೂ ಸೇರಿ ಇಂಥ ಕೊಲೆಗಳು ನಡೆಯುತ್ತಿವೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.