ಕನ್ನಡಿಗರ ವಿರುದ್ಧ ಸಿಎಂ ಲಕ್ಷ್ಮೀ ಹೆಬ್ಬಾಳ್ಕರನ್ನ ಛೂ ಬಿಟ್ಟಿದ್ದಾರೆ: ಕರಂದ್ಲಾಜೆ

Public TV
2 Min Read
SHOBHA CM 1

ಬೆಂಗಳೂರು: ಕನ್ನಡಿಗರ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಿದ್ದರಾಮಯ್ಯ ಛೂ ಬಿಟ್ಟಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಚುನಾವಣೆ ವೇಳೆಯಲ್ಲಿ ಮಾತ್ರ ಕನ್ನಡ ಪ್ರೀತಿ ತೋರಿಸ್ತಾರೆ. ಧ್ಚಜದ ವಿಚಾರದಲ್ಲಿ ಆಗಿರಬಹುದು, ಹಿಂದೆ ಹೇಳಿಕೆ ಆಗಿರಬಹುದು, ಈ ವಿಚಾರಗಳಲ್ಲಿ ಕೇಂದ್ರಕ್ಕೆ ಪತ್ರ ಬರೆದಿದ್ರು. ಆದ್ರೆ ನಿಮ್ಮ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯ ಹೇಳಿಕೆಯ ಬಗ್ಗೆ ನಿಮ್ಮ ನಿಲುವು ಏನು ಎಂದು ಪ್ರಶ್ನಿಸಿದರು.

ಕೊಲೆ ಮಾಡಿ ಕ್ಷಮೆ ಕೇಳಿದ್ರೆ ಕ್ಷಮಿಸಲ್ಲ ಕೋರ್ಟ್. ಮೊದಲು ಶಿಕ್ಷೆ ಆಗುತ್ತೆ, ಬಳಿಕ ಜೈಲಿನಲ್ಲಿದ್ದಾಗ ಕ್ಷಮಾದಾನ ಸಿಗುತ್ತೆ. ತಪ್ಪು ಮಾಡಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಕೇಳಿದ್ರೆ ಆಗಲ್ಲ. ಮೊದಲು ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ಕಾನೂನು ಎಲ್ಲರಿಗೂ ಒಂದೇ. ಸಿದ್ದರಾಮಯ್ಯ ಅವರೇ, ಪರಮೇಶ್ವರ್ ಅವರೇ ನಿಮ್ಮ ಮಹಿಳಾ ಘಟಕದ ಅಧ್ಯಕ್ಷೆಯನ್ನ ವಜಾ ಮಾಡಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ಎಂದರು.

ಮಹಾಜನ್ ವರದಿ ಜಾರಿಯಾಗಬೇಕು ಎಂಬುದು ಬಿಜೆಪಿ ನಿಲುವು. ಭಾಷೆ, ನಾಡು, ಗಡಿ ಬಗ್ಗೆ ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ಬೆಳಗಾವಿ ಬಗ್ಗೆ ಪ್ರಕರಣ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಜೈ ಮಹಾರಾಷ್ಟ್ರ ಎಂದು ಭಾಷಣ ಮುಕ್ತಾಯಗೊಳಿಸುತ್ತಾರೆ. ಕರ್ನಾಟಕ ವಿರೋಧಿ ನೀತಿ ಕಾಂಗ್ರೆಸ್ ಪ್ರತಿಸಲ ಅನುಸರಿಸುತ್ತಾ ಬಂದಿದೆ ಎಂದು ಕಿಡಿಕಾರಿದರು.

ಬೆಳಗಾವಿ ವಿಷಯದಲ್ಲಿ ಬಿಜೆಪಿ ನಿಲುವು ಸ್ಪಷ್ಟ ಇದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದನ್ನು ಸಾಬೀತು ಪಡಿಸಲೆಂದೇ ಬಿಜೆಪಿ ಅವಧಿಯಲ್ಲಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿದ್ದು. ಅಧಿವೇಶನ ನಡೆಸುವಂತೆ ಮಾಡಿದ್ದು ನಾವು. ಇಷ್ಟಾದ ಮೇಲೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಮರ್ಥಿಸಿಕೊಳ್ತಿದ್ದಾರೆ ಎಂದರು.

ಬೆಳಗಾವಿಯಲ್ಲಿ ಮಹಾರಾಷ್ಟ್ರಿಗರ ಪುಂಡಾಟಿಕೆ ಮಾಡಿದ್ರೆ ಏನು ಕ್ರಮ ಕೈಗೊಳ್ಳಲಾಗುತ್ತೋ ಅದೇ ಕ್ರಮವನ್ನು ಹೆಬ್ಬಾಳ್ಕರ್ ವಿರುದ್ಧ ಸರ್ಕಾರ ಕೈಗೊಳ್ಳಬೇಕು. ಕನ್ನಡದ ನೆಲದ ಮೇಲೆ ನಿಂತು ಕನ್ನಡಿಗರಿಗೆ ಅವಹೇಳನ ಮಾಡುವುದನ್ನು ಸಹಿಸಲ್ಲ. ಕನ್ನಡ ಧ್ವಜ ವಿಚಾರದಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ. ನಾಡಗೀತೆಗೆ ಮತ್ತು ಧ್ವಜಕ್ಕೆ ನಾವೆಲ್ಲಾ ಗೌರವ ನೀಡುತ್ತಿದ್ದೇವೆ. ಆದರೆ ಹೆಬ್ಬಾಳ್ಕರ್ ಹೇಳಿಕೆಯಿಂದಾಗಿ ಕಾಂಗ್ರೆಸ್ ನ ಗೋಸುಂಬೆತನ ಬಹಿರಂಗವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದರು.

ಸುಳ್ಳು ಮಾಹಿತಿ ನೀಡಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿರುವ ಆರ್‍ಬಿ ತಿಮ್ಮಾಪುರ ಅವರನ್ನು ಯಾವುದೇ ಕಾರಣಕ್ಕೂ ಮಂತ್ರಿ ಮಾಡಬಾರದು. ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡುತ್ತೇವೆ. ಅಲ್ಲದೆ ಇದರ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯನ್ನೂ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *