ಚಿಕ್ಕಮಗಳೂರು: ಸುದ್ದಿಯಾಗಲು ದಂಡೋ ಮಾರೋ ಎಂದು ಹೇಳುತ್ತಿರುವ ಕಾಂಗ್ರೆಸ್ ಶವಪೆಟ್ಟಿಗೆಗೆ ಅದೇ ಕೊನೆ ಮೊಳೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಸಂಸದರ ಕಚೇರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ. ರಾಹುಲ್ ಗಾಂಧಿ ಸುದ್ದಿಯಲ್ಲಿಲ್ಲ. ಸೋನಿಯಾ ಗಾಂಧಿಯೂ ಸುದ್ದಿಯಲ್ಲಿಲ್ಲ. ದೇಶದ ಜನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನ ಮರೆಯುತ್ತಿದ್ದಾರೆ. ಮೀಡಿಯಾಗಳಿಗೂ ಅವರು ಮಹತ್ವದ ವ್ಯಕ್ತಿಗಳು ಅನ್ನಿಸಿಲ್ಲ. ಹಾಗಾಗಿ ಏನಾದರೂ ಮಾಡಿ ಸುದ್ದಿಯಾಗಲೇಬೇಕು ಎಂದು ರಾಹುಲ್ ಗಾಂಧಿ ಪ್ರಯತ್ನ ಮಾಡ್ತಿದ್ದಾರೆ ಎಂದರು.
ಅವರು ದಂಡೋ ಮಾರೋ ಎಂದು ಯಾರಿಗೆ ಹೇಳಿದ್ದಾರೆ. ಅವರು ಈ ಹೇಳಿಕೆಯನ್ನ ಗಡಿಯಲ್ಲಿ ಹೋಗಿ ಹೇಳಬೇಕು. ನುಸುಳುಕೋರರು ಹಾಗೂ ಅಕ್ರಮ ವಾಸಿಗಳು ಬರುತ್ತಿದ್ದಾರೆ. ಅವರ ಪರವಾಗಿ ಒಂದು ಕಡೆ ನಿಲ್ಲುತ್ತಾರೆ. ಮತ್ತೊಂದೆಡೆ ದೇಶದ ಪ್ರಧಾನಿ ಹಾಗೂ ದೇಶದ ಆಡಳಿತ ನಡೆಸುವವರ ಬಗ್ಗೆ ದಂಡೋ ಮಾರೋ ಅಂತಾರೆ. ಇದು ಕಾಂಗ್ರೆಸ್ ಮಾನಸಿಕತೆಯನ್ನ ತೋರಿಸುತ್ತದೆ. ಕಾಂಗ್ರೆಸ್ ಅವನತಿಯ ಶವಪೆಟ್ಟಿಗೆಗೆ ಇದು ಕೊನೆಯ ಮೊಳೆ ಎಂಬುದು ನನ್ನ ಅನಿಸಿಕೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.