`ಬೆಳಗಾವಿ ಫೈಲ್ಸ್’ ಕಾರ್ಟೂನ್ ಹಂಚಿಕೊಂಡ ರಾವತ್- `ಶಿವಸೇನಾ ಫೈಲ್ಸ್’ ನೋಡುವಂತೆ ಆಪ್ ತಿರುಗೇಟು

Public TV
2 Min Read
RAUT AAP

ಬೆಳಗಾವಿ: ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ಕುರಿತು ರಾಷ್ಟ್ರವ್ಯಾಪಿ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ಇಲ್ಲಿನ ಶಿವಸೇನಾ ಸಂಸದ ಸಂಜಯ್ ರಾವತ್ `ಬೆಳಗಾವಿ ಫೈಲ್ಸ್’ ವ್ಯಂಗ್ಯಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಟೀಕಿಸಿದ್ದಾರೆ. ಜೊತೆಗೆ ಮತ್ತೆ ಬೆಳಗಾವಿಯ ಗಡಿ ವಿವಾದವನ್ನು ಕೆಣಕಿದ್ದಾರೆ.

the kashmir files 2

ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡಿ `ಬೆಳಗಾಂ ಫೈಲ್ಸ್’ ಎಂದು ಬರೆದಿದ್ದಾರೆ. ಬೆಳಗಾಂ ಫೈಲ್ಸ್ ಏನು ಕಡಿಮೆ ಇದೆಯೇ ಎಂದು ಪ್ರಶ್ನಿಸಲಾಗಿದೆ. ಪ್ರಜಾಪ್ರಭುತ್ವದ ಹತ್ಯೆ ನಡೆದಿದೆ ಎಂದು ಬಿಂಬಿಸಲಾಗಿದೆ. ಮರಾಠಿ ಯುವಕರು ಅಸಹಾಯಕರಾಗಿದ್ದಾರೆ ಎಂದು ಚಿತ್ರಿಸಲಾಗಿದೆ. ಗಡಿ ಬೆಳಗಾವಿಯಲ್ಲಿ ಮರಾಠಿ ಭಾಷಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಬಿಂಬಿಸುವ ಯತ್ನವನ್ನು ವ್ಯಂಗ್ಯಚಿತ್ರದ ಮೂಲಕ ಮಾಡಲಾಗಿದೆ. ಬೆಳಗಾವಿ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ಹಾಗೂ ಪೋಲಿಸರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಪ್ರತಿಬಿಂಬಿಸುವ ಪೋಸ್ಟ್ ಹಾಕುವ ಮೂಲಕ ಪುಂಡಾಟಿಕೆ ಮೆರೆದಿದ್ದಾರೆ.

ಎಂಎಸ್‍ಎಂಇ ಹಾಗೂ ಶೀವಸೇನೆ ನಾಯಕರು ಹಲವು ಬಾರಿ ಬೆಳಗಾವಿ ಗಡಿ ವಿಚಾರ ಕೆಣಕಿ ಮುಖಭಂಗ ಅನುಭವಿಸಿದ್ದರು. ಇದೀಗ `ದಿ ಕಾಶ್ಮೀರ್ ಫೈಲ್ಸ್’ ಗಿಂತಲೂ ಬೆಳಗಾವಿ ಫೈಲ್ಸ್ ಭಯಾನಕವಾಗಿದೆ ಎನ್ನುವ ಮೂಲಕ ಉದ್ಧಟತನ ಮೆರೆದಿದ್ದಾರೆ. ಇದರ ವಿರುದ್ಧ ಬೆಳಗಾವಿ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದನ್ನೂ ಓದಿ: ಜನರೇ ಬಿಜೆಪಿ ಆಡಳಿತ ಮೆಚ್ಚಿದ್ದಾರೆ, ಅದ್ಕೆ ನಾವು ಜಾಸ್ತಿ ಮಾತಾಡಲ್ಲ: ಡಿ.ಕೆ ಸುರೇಶ್ ವ್ಯಂಗ್ಯ

Sanjay Raut 2

ಸಂಜಯ್ ರಾವತ್ ಟ್ವೀಟ್‍ಗೆ ಕಿಡಿಕಾರಿರುವ ಕನ್ನಡಪರ ಹೋರಾಟಗಾರರು, ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುತ್ತೇವೆ ಅನ್ನೋರಿಗೆ ದೇಶದ್ರೋಹಿ ಅಂತೀವಿ. ಇನ್ನೂ ಕರ್ನಾಟಕದ ಅವಿಭಾಜ್ಯ ಅಂಗವಾಗಿರೋ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಅನ್ನುವವರಿಗೆ ಏನೆಂದು ಕರೆಯಬೇಕು? ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಮಾತು ಶಿವಸೇನೆ ಮುಖಂಡರಿಗೆ ಸರಿಯಾಗಿಯೇ ಅನ್ವಯಿಸುತ್ತದೆ. ಎಷ್ಟು ಬಾರಿ ಮುಖಭಂಗ ಅನುಭವಿಸಿದರೂ ಕ್ಯಾತೆ ತೆಗೆಯೋದು ಮಾತ್ರ ನಿಲ್ಲಿಸುತ್ತಿಲ್ಲ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

SUPREME COURT

2004ರಿಂದಲೂ ಸುಪ್ರೀಂ ಕೋರ್ಟ್ ಎದುರು ಬಾಕಿಯಿರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದವನ್ನು ಮಹಾರಾಷ್ಟ್ರ ಸರ್ಕಾರ ಪದೇ ಪದೇ ಕೆಣಕುತ್ತಿದೆ. ಅಲ್ಲಿನ ವಿಧಾನಮಂಡಲ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಅಲ್ಲದೇ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಈ ಮೂಲಕ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹಲವು ಪಾಕಿಸ್ತಾನಗಳನ್ನು ಹುಟ್ಟುಹಾಕಲು ಬಿಜೆಪಿ ಬಯಸುತ್ತಿದೆ: ಮೆಹಬೂಬಾ ಮುಫ್ತಿ

aap

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ಮುಖಂಡ ರಾಜಕುಮಾರ್ ಟೋಪಣ್ಣ, ಶಿವಸೇನಾದವರು ಗಡಿ ವಿವಾದವನ್ನು ಜೀವಂತವಿಡಲು ಯತ್ನಿಸುತ್ತಿದ್ದಾರೆ. ಪದೇ ಪದೇ ಕೆಣಕುತ್ತಿದೆ. ಬೆಳಗಾವಿಯಲ್ಲಿ ಕನ್ನಡಿಗರು- ಮರಾಠಿಗರು ಒಗ್ಗಟ್ಟಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನಾ ಭಾಗಿಯಾಗಿರುವ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಂಜಯ್ ರಾವತ್ ಮೊದಲು `ಶಿವಸೇನಾ ಫೈಲ್ಸ್’ ನೋಡಲಿ ಎಂದು ತಿರುಗೇಟು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *