ಉಡುಪಿ: ಶಿವ ಶಿವ ಎಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರಿಲ್ಲ..! ದೇಶದಾದ್ಯಂತ ಶಿವನಾಮಸ್ಮರಣೆ ನಡೆಯುತ್ತಿದೆ. ಶಿವರಾತ್ರಿ ದಿನ ಶಿವದೇವನ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಉಡುಪಿಯ ಅತಿ ಪುರಾತನ ದೇಗುಲ ಎಂದೇ ಪ್ರಸಿದ್ಧಿ ಪಡೆದಿರುವ ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ಕಳೆಕಟ್ಟಿದೆ.
ಅನಂತೇಶ್ವರ ದೇವರ ದರ್ಶನ ಮಾಡಿ ಭಕ್ತರು ಪುನೀತರಾಗಿದ್ದಾರೆ. ವಿಶೇಷ ಪೂಜೆ, ಹೋಮ-ಹವನ ಮಂತ್ರ ಪಠಣ ನಡೆಯುತ್ತಿದೆ. ಅನಂತೇಶ್ವರ ದೇವಸ್ಥಾನಕ್ಕೆ ವಿಶೇಷ ಹೂವಿನ ಅಲಂಕಾರವನ್ನು ಮಾಡಲಾಗಿದೆ. ರಜತ ಕವಚದಲ್ಲಿ ಈಶ್ವರ ದೇವರು ಭಕ್ತರಿಗೆ ದರ್ಶನ ಕೊಡುತ್ತಿದ್ದಾರೆ. ರಾತ್ರಿ ಪೂರ್ತಿ ಜಾಗರಣೆ ರಥೋತ್ಸವ ನಡೆಯಲಿದೆ.
ಪುರಾಣ ಕಥೆ ಹೀಗೆ ಹೇಳುತ್ತದೆ
ಅನಂತೇಶ್ವರ ದೇವರು ಮಧ್ವಾಚಾರ್ಯರನ್ನು ಕರುಣಿಸಿದ ದೇವರು. ವಾಯುದೇವರ ಅವತಾರ ಎಂದೇ ಮಧ್ವಾಚಾರ್ಯರು ಪ್ರಸಿದ್ಧಿ. ಹಲವಾರು ಮನೆತನಗಳಿಗೆ ಅನಂತೇಶ್ವರ ಕುಲದೇವರು. ಗ್ರಹಚಾರ ದೋಷಗಳು ಅನಂತೇಶ್ವರನಿಗೆ ಎಳ್ಳೆಣ್ಣೆ ಸಮರ್ಪಣೆ ಮಾಡುವ ಮೂಲಕ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.
ಅನಂತೇಶ್ವರ ದೇವರ ಅಭಿಷೇಕದ ನೀರನ್ನು ಆ ಮನೆಗೆ ಪ್ರೋಕ್ಷಣೆ ಮಾಡುವಂತಹ ಸಂಪ್ರದಾಯ ಇವತ್ತಿಗೂ ನಡೆದುಕೊಂಡು ಬಂದಿದೆ. ಅನಂತೇಶ್ವರ ದೇವರ ದೇವಸ್ಥಾನದ ಒಳಗೆ ಹಲವಾರು ವಿಗ್ರಹ ಇದೆ. ಎಲ್ಲಾ ದೇವರಿಗೆ ಅಭಿಷೇಕಗಳು ನಡೆಯುತ್ತದೆ. ಅನಾದಿಕಾಲದಲ್ಲಿ ಪ್ರತಿಷ್ಠಾಪಿಸಲಾದ ಶಿವಲಿಂಗಕ್ಕೆ ಅಭಿಷೇಕ ನಡೆಯುತ್ತದೆ. ಆ ತೀರ್ಥಕ್ಕೆ ಬಹಳ ಮಹತ್ವ ಇದೆ. ಅಭಿಷೇಕದ ನೀರನ್ನು ಮನೆಗಳಿಗೆ ಪ್ರೋಕ್ಷಣೆ ಮಾಡುವ ಸಂಪ್ರದಾಯ ಇದೆ.
ಹಿರಿಯ ಪುರೋಹಿತ ರಾಮಕೃಷ್ಣ ಕೊಡಂಚ ಅನಂತೇಶ್ವರ ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದ್ದಾರೆ. ಮಕರ ಸಂಕ್ರಾಂತಿ ದಿನ ಮೂರು ರಥಗಳನ್ನು ಎಳೆಯುತ್ತಾರೆ. ಅನಂತೇಶ್ವರ ಚಂದ್ರಮೌಳೇಶ್ವರ ಒಂದು ರಥದಲ್ಲಿ. ಶ್ರೀಕೃಷ್ಣ ಮುಖ್ಯಪ್ರಾಣ ದೇವರು ಒಂದು ರಥದಲ್ಲಿ ಎಳೆದು ನಿರಂತರ ಉತ್ಸವ ನಡೆಯುತ್ತದೆ. ದಿನಪೂರ್ತಿ ಶಿವನ ಭಕ್ತರು ಉಪವಾಸವಿದ್ದು, ಜಾಗರಣೆ ಮಾಡಿ ದೇವರ ನಾಮ ಸ್ಮರಣೆ ಮಾಡುತ್ತಾರೆ. ರಾತ್ರಿಪೂರ್ತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ಉತ್ಸವಗಳು ನಡೆಯುತ್ತದೆ ಎಂದರು.