– 2.50 ಲಕ್ಷ ಕ್ಯುಸೆಕ್ ನೀರು ಹೊರಬಿಟ್ಟರೆ ಜನರಿಗೆ ಅಪಾಯ; ಸಚಿವರ ಆತಂಕ
ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra Reservoir) ಕ್ರಸ್ಟ್‌ಗೇಟ್ ಸಂಖ್ಯೆ 19ರಲ್ಲಿ ಚೈನ್ ಲಿಂಕ್ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ಒಳಹರಿವು ಹೆಚ್ಚಿರುವ ಕಾರಣ ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುತ್ತಿದೆ. ತಡರಾತ್ರಿಯೇ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ (Shivraj Tangadagi) ಜಲಾಶಯಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದ್ದಾರೆ. ಜೊತೆಗೆ ಅಧಿಕಾರಿಗಳಿಂದ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಲಾಶಯಕ್ಕೆ ಬಂದು ವೀಕ್ಷಣೆ ಮಾಡಿದ್ದೇನೆ, ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಸದ್ಯದ ಮಟ್ಟಿಗೆ 60 ರಿಂದ 65 ಟಿಎಂಸಿಗೂ ಹೆಚ್ಚು ನೀರು ಖಾಲಿ ಮಾಡಬೇಕಾಗುತ್ತದೆ. 20 ಫೀಟ್ ನೀರು ಖಾಲಿಯಾದ್ರೆ ಮಾತ್ರ ಸಮಸ್ಯೆ ಏನಾಗಿದೆ ಅಂತ ಗೊತ್ತಾಗಲಿದೆ. ಹೀಗಾಗಿ ಡ್ಯಾಂ ನಲ್ಲಿರೋ ನೀರನ್ನು ಖಾಲಿ ಮಾಡೋ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದ್ದಾರೆ.
ಡ್ಯಾಂ ನಿರ್ಮಾಣ ಸಮಯದಲ್ಲಿನ ಡಿಸೈನ್ ತರಿಸಲಾಗುತ್ತಿದೆ. ನೀರಿನ ರಭಸ ಹೆಚ್ಚಾಗಿರುವುದರಿಂದ ಕೆಳಗಿಳಿದು ಕೆಲಸ ಮಾಡಲು ಆಗಲ್ಲ. ಸದ್ಯ 1 ಲಕ್ಷ ಕ್ಯುಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. 2.35 ಲಕ್ಷ ಕ್ಯುಸೆಕ್ ನೀರು ಬಿಟ್ಟರು ಯಾರಿಗೂ ಯಾವುದೇ ತೊಂದರೆ ಆಗಲ್ಲ. 2.50 ಲಕ್ಷ ಕ್ಯುಸೆಕ್ ನೀರು ಹರಿದ್ರೆ ತೊಂದರೆ ಆಗುತ್ತದೆ. ಆದ್ದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಘಟನೆ ಬಗ್ಗೆ ಸಿಎಂ ಮತ್ತು ಡಿಸಿಎಂಗೆ ಮಾಹಿತಿ ನೀಡಲಾಗುತ್ತಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈನಿಂದ ತಜ್ಞರ ತಂಡ ಬರಲಿದೆ. ಭಾನುವಾರ (ಆ.11) ಬೆಳಗ್ಗೆ ತಜ್ಞರ ತಂಡಗಳು ಡ್ಯಾಮ್‌ಗೆ ಆಗಮಿಸಿ ಪರಿಶೀಲನೆ ನಡೆಸಲಿವೆ ಎಂದು ಅವರು ತಿಳಿಸಿದ್ದಾರೆ.
ಏನಾಗಿದೆ?
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸಂಖ್ಯೆ 19ರ ಚೈನ್‌ಲಿಂಕ್ ಶನಿವಾರ (ಆ.10) ತಡರಾತ್ರಿ 11 ಗಂಟೆ ಸುಮಾರಿಗೆ ತುಂಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೈನ್ ಲಿಂಕ್ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ರಭಸಕ್ಕೆ ತುಂಡಾಗಿರುವ ಭಾಗವೂ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.