ಶಿವಮೊಗ್ಗ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಹಿಟ್ ಆಗಿದ್ದು, ಶಿವಮೊಗ್ಗದಲ್ಲಿ ಟಗರು ವಿಜಯೋತ್ಸವ ಮೆರವಣಿಗೆ ಮಾಡಿದ್ದಾರೆ.
ಟಗರು ವಿಜಯೋತ್ಸವದಲ್ಲಿ ಡಾ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಚಿಟ್ಟೆ ವಶಿಷ್ಟ ಭಾಗಿಯಾಗಿದ್ದು, ಶಿವಪ್ಪನಾಯಕನ ಪ್ರತಿಮಗೆ ಹೂವಿನ ಹಾರ ಹಾಕಿ ನಹೆರು ರಸ್ತೆಯಲ್ಲಿ ರೋಡ್ ಶೋ ನಡೆಸಿದರು.
ಶಿವರಾಜ್ ಕುಮಾರ್ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್, ಧನಂಜಯ್ ಹಾಗೂ ವಶಿಷ್ಟ ಅವರನ್ನು ನೋಡಿ ಕಣ್ತುಂಬಿಕೊಂಡು ಹರ್ಷೋದ್ಗಾರ ವ್ಯಕ್ತಪಡಿಸಿ, ಜಯ ಘೋಷ ಕೂಗಿದರು.
ಜೋಗಿ ಸಿನಿಮಾದಲ್ಲಿ ನೋಡಿದ ಶಿವಣ್ಣನನ್ನು ಮತ್ತೆ ನೆನಪಿಸುವಂತಹ `ಟಗರು’ ಪಕ್ಕಾ ಮಾಸ್ ಫಿಲಂ ಆಗಿದ್ದು, ಸಿನಿಮಾದಲ್ಲಿ ಶಿವಣ್ಣ ಅವರು ಒಬ್ಬ ಪೊಲೀಸ್ ಅಧಿಕಾರಿಯಾಗಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಸಿನಿಮಾದ ಹೆಸರಿನ ಟಗರಿನಂತೆ ಎಗರಿ ಎಗರಿ ಎದುರಾಳಿಗಳನ್ನು ಸದೆಬಡಿಯುತ್ತಾರೆ.
ಪೊಲೀಸ್ ಪಾತ್ರ ಸೇರಿದಂತೆ ಹಲವಾರು ಗೆಟಪ್‍ಗಳಲ್ಲಿ ಶಿವಣ್ಣ ಮಿಂಚಿದ್ದರೆ, ಖಳನಾಯಕರ ಪಾತ್ರದಲ್ಲಿ ಧನಂಜಯ್ ಮತ್ತು ವಶಿಷ್ಟ ಸಿಂಹ ಅಭಿನಯಿಸಿದ್ದಾರೆ. ಭಾವನಾ ಮೆನನ್ ಮತ್ತು ಮಾನ್ವಿತಾ ಹರೀಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಸದ್ಯ ಟಗರು ಚಿತ್ರ ಕರ್ನಾಟಕದಾದ್ಯಂತ ಯಶಸ್ವಿಯಾಗಿದ್ದು, ಈಗ ವಿದೇಶದಲ್ಲೂ ರಾರಾಜಿಸುತ್ತಿದೆ. ಅಮೆರಿಕದ ಚಿಕಾಗೋ, ಫಿಲಡೆಲ್ಫಿಯ ಸೇರಿದಂತೆ 25ಕ್ಕೂ ಹೆಚ್ಚು ಕಡೆ ಸಿನಿಮಾ ಬಿಡುಗಡೆಯಾಗಿದೆ.