ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಿ ವಿಲನ್ ಚಿತ್ರದ ತಮ್ಮ ಬಾಗದ ಕೆಲ ಭಾಗಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಮಿನರ್ವ ಮಿಲ್ಸ್ ಆಸುಪಾಸಲ್ಲಿಯೇ ಈ ಚಿತ್ರೀಕರಣ ನಡೆದಿದೆ. ಇದೇ ಸಂದರ್ಭದಲ್ಲಿ ಅಲ್ಲೇ ಬಾಜಿನಲ್ಲಿ ಹಾಡೊಂದರ ಚಿತ್ರೀಕರಣ ನಡೆಸುತ್ತಿದ್ದ ಎಪಿ ಅರ್ಜುನ್ ನಿದೇಶನದ ಕಿಸ್ ಸೆಟ್ಟಿಗೆ ಭೇಟಿ ನೀಡಿರೋ ಶಿವಣ್ಣ ನಾಯಕ ನಾಯಕಿಯ ಜೊತೆ ಹೆಜ್ಜೆ ಹಾಕಿ ಉತ್ಸಾಹ ತುಂಬಿದ್ದಾರೆ!
ಎ.ಪಿ. ಅರ್ಜುನ್ ನಾಯಕ ನಾಯಕಿಯ ಹಾಡೊಂದನ್ನು ಮಿನರ್ವ ಮಿಲ್ಸ್ ಪರಿಸರದಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಅದೇ ಹೊತ್ತಿಗೆ ವಿಲನ್ ನಿರ್ದೇಶಕ ಪ್ರೇಮ್ ಅದರ ಇನ್ನೊಂದು ಮಗ್ಗುಲಲ್ಲಿ ಶಿವಣ್ಣನ ದೃಶ್ಯಾವಳಿಗಳನ್ನು ಸೆರೆ ಹಿಡಿಯುತ್ತಿದ್ದರು. ಈ ನಡುವೆ ವಿರಾಮದ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರಿಗೆ ಪಕ್ಕದಲ್ಲಿಯೇ ಕಿಸ್ ಚಿತ್ರದ ಚಿತ್ರೀಕರಣ ನಡೆಯುತ್ತಿರೋ ಸಂಗತಿ ತಿಳಿದಿದೆ.
ತಕ್ಷಣವೇ ಶಿವಣ್ಣ ರೆಸ್ಟ್ ಮೂಡನ್ನು ಕ್ಯಾನ್ಸಲ್ ಮಾಡಿಕೊಂಡು ಸೀದಾ ಕಿಸ್ ಸೆಟ್ಟಿಗೆ ತೆರಳಿದ್ದಾರೆ. ಅದು ನಿಜಕ್ಕೂ ಎಪಿ ಅರ್ಜುನ್ ಮತ್ತವರ ತಂಡಕ್ಕೆ ನಂಬಲಸಾಧ್ಯವಾದ ಸರ್‍ಪ್ರೈಸ್. ಹಾಗೆ ಬಂದ ಶಿವಣ್ಣ ಕಿಸ್ ಚಿತ್ರದ ಹೀರೋ ಮತ್ತು ತಂಡದೊಂದಿಗೆ ಹೆಜ್ಜೆ ಹಾಕಿದ್ದಾರೆ. ಎಲ್ಲರನ್ನೂ ಆತ್ಮೀಯವಾಗಿ ಮಾತಾಡಿಸಿದ್ದಾರೆ.
ಇದರಿಂದ ನಿರ್ದೇಶಕ ಎ ಪಿ ಅರ್ಜುನ್ ಖುಷಿಯಾಗಿದ್ದಾರೆ. ಅರ್ಜುನ್ ಕೂಡಾ ಶಿವರಾಜ್ ಕುಮಾರ್ ಅವರ ಅಭಿಮಾನಿಯಂತೆ. ಯಾವ ಸೂಚನೆಯೂ ಇಲ್ಲದೆ ಏಕಾಏಕಿ ತಮ್ಮ ಚಿತ್ರೀಕರಣದ ಸೆಟ್ ನಲ್ಲಿ ಶಿವಣ್ಣನನ್ನು ನೋಡಿ ಅವರು ಥ್ರಿಲ್ ಆಗಿದ್ದಾರೆ. ಯುವ ತಂಡಕ್ಕೆ ತಾವಾಗಿಯೇ ಬಂದು ಸಾಥ್ ನೀಡಿ ಹುರುಪು ನೀಡಿದ ಶಿವರಾಜ್ ಕುಮಾರ್ ಅವರ ಸರಳ ನಡವಳಿಕೆ ನಿಜಕ್ಕೂ ಮಾದರಿ.