– ಸರಳ ಮದುವೆ ಸಂಪ್ರದಾಯಕ್ಕೆ ಒತ್ತು; ದುಂದುವೆಚ್ಚ ಕಡಿವಾಣಕ್ಕೆ ಗ್ರಾಮಸ್ಥರ ನಿರ್ಧಾರ
ಶಿವಮೊಗ್ಗ: ಮದುವೆ ಸಮಾರಂಭಗಳ ಹೆಸರಿನಲ್ಲಿ ಹೆಚ್ಚುತ್ತಿರುವ ಅದ್ದೂರಿತನ ಹಾಗೂ ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಸೊರಬ ತಾಲೂಕಿನ ಕುಂದಗಸವಿ (Kundagasavi) ಗ್ರಾಮಸ್ಥರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ದೀವರು (ಈಡಿಗ) ಸಮುದಾಯದ ಮದುವೆಗಳಲ್ಲಿ ನಡೆಯುತ್ತಿರುವ ಅದ್ಧೂರಿ ಬೀಗರೂಟದ ಆಚರಣೆಯನ್ನು ನಿಷೇಧಿಸಿ, ಸರಳ ಮದುವೆ ಸಂಪ್ರದಾಯಕ್ಕೆ ಆದ್ಯತೆ ನೀಡಲು ಗ್ರಾಮಸ್ಥರು ಸರ್ವಾನುಮತದಿಂದ ತೀರ್ಮಾನಿಸಿದ್ದಾರೆ.
ಪ್ರತಿಷ್ಠೆಗಾಗಿ ದುಂದುವೆಚ್ಚ ಬೇಡ
ಹಿಂದಿನ ಕಾಲದಲ್ಲಿ ಮದುವೆಯ ನಂತರ ನಡೆಯುವ ಬೀಗರೂಟವು (Beegara Oota) ಕುಟುಂಬದವರು ಹಾಗೂ ಬಂಧು-ಬಳಗದವರು ಒಂದೆಡೆ ಸೇರಿ ಸಂತೋಷ ಹಂಚಿಕೊಳ್ಳುವ ಸರಳ ಸಂಪ್ರದಾಯವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಆಚರಣೆ ತನ್ನ ಮೂಲ ಆಶಯವನ್ನು ಕಳೆದುಕೊಂಡು, ಪ್ರತಿಷ್ಠೆ ಮತ್ತು ಪೈಪೋಟಿಯ ಪ್ರದರ್ಶನವಾಗಿ ಬದಲಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಇತರರು ಅದ್ದೂರಿಯಾಗಿ ಬೀಗರೂಟ ಆಯೋಜಿಸಿದ್ದಾರೆ ಎಂಬ ಕಾರಣಕ್ಕೆ ತಾವೂ ಅದಕ್ಕಿಂತ ಕಡಿಮೆಯಿಲ್ಲದಂತೆ ಕಾರ್ಯಕ್ರಮ ನಡೆಸಬೇಕೆಂಬ ಮನೋಭಾವ ಹೆಚ್ಚುತ್ತಿದೆ. ಇದರಿಂದ ಕುಟುಂಬಗಳು ತಮ್ಮ ಆರ್ಥಿಕ ಸಾಮರ್ಥ್ಯವನ್ನು ಮೀರಿ ಹಣ ಖರ್ಚು ಮಾಡುತ್ತಿದ್ದು, ಕೆಲವರು ಸಾಲದ ಸುಳಿಗೆ ಸಿಲುಕುವ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ. ಇಂತಹ ದುಂದುವೆಚ್ಚದಿಂದ ಸಮಾಜದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಮದುವೆ ಎಂಬುದು ಎರಡು ಕುಟುಂಬಗಳ ಬಾಂಧವ್ಯ ಬೆಸೆಯುವ ಶುಭಕಾರ್ಯವೇ ಹೊರತು, ಆರ್ಥಿಕ ಸಾಮರ್ಥ್ಯ ಪ್ರದರ್ಶಿಸುವ ವೇದಿಕೆಯಾಗಬಾರದು. ಅನಗತ್ಯ ಖರ್ಚುಗಳಿಗೆ ಬಳಸುವ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಕುಟುಂಬದ ಭವಿಷ್ಯದ ಅಭಿವೃದ್ಧಿಗೆ ವಿನಿಯೋಗಿಸಬೇಕು. ಹಿರಿಯರು ಪಾಲಿಸಿಕೊಂಡು ಬಂದ ಸರಳ ಸಂಪ್ರದಾಯಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂಬ ಆಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಅದ್ಧೂರಿ ಬೀಗರೂಟದ ಆಚರಣೆಯನ್ನು ನಿಷೇಧಿಸಿ, ಸರಳವಾಗಿ ಮದುವೆ ಸಂಪ್ರದಾಯಗಳನ್ನು ಆಚರಿಸಲು ನಿರ್ಧರಿಸಲಾಯಿತು. ಸೊರಬ ತಾಲೂಕಿನಲ್ಲಿ ವ್ಯಾಪಿಸುತ್ತಿರುವ ಸಾಮಾಜಿಕ ಆಂದೋಲನ ಸೊರಬ ತಾಲೂಕಿನಲ್ಲಿ ಅದ್ದೂರಿ ಬೀಗರೂಟದ ವಿರುದ್ಧ ಸಾಮಾಜಿಕ ಜಾಗೃತಿ ಹೆಚ್ಚುತ್ತಿರುವುದು ವಿಶೇಷವಾಗಿದೆ. ತಾಲೂಕಿನ ಚಿಕ್ಕಶಕುನ ಮತ್ತು ಸೀಗೆಹಳ್ಳಿ ಗ್ರಾಮಗಳಲ್ಲಿಯೂ ಗ್ರಾಮಸ್ಥರು ಸಭೆ ಸೇರಿ ಅದ್ಧೂರಿ ಬೀಗರೂಟಕ್ಕೆ ಕಡಿವಾಣ ಹಾಕುವ ನಿರ್ಧಾರ ಕೈಗೊಂಡಿದ್ದಾರೆ. ನೆಗವಾಡಿ ಗ್ರಾಮದಲ್ಲಿಯೂ ದೀವರು (ಈಡಿಗ) ಸಮುದಾಯದ ಮದುವೆಗಳಲ್ಲಿ ನಡೆಯುವ ಅದ್ಧೂರಿ ಬೀಗರೂಟ ಹಾಗೂ ನಿಶ್ಚಿತಾರ್ಥದ ಸಂದರ್ಭದಲ್ಲಿ ಆಯೋಜಿಸುವ ದುಬಾರಿ ಊಟದ ಕಾರ್ಯಕ್ರಮಗಳನ್ನು ನಿಷೇಧಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೂ ಮೊದಲು ಶಿಕಾರಿಪುರ ತಾಲೂಕಿನ ಹರಗಿ ಗ್ರಾಮದಲ್ಲಿಯೂ ಅದ್ಧೂರಿ ಬೀಗರೂಟದ ವಿರುದ್ಧ ನಿರ್ಧಾರ ಕೈಗೊಂಡಿರುವುದು ಗಮನಾರ್ಹ.
ಈ ಸಂದರ್ಭದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ರೊಕ್ಕಪ್ಪ, ಪರಶುರಾಮ, ಗ್ರಾಮದ ಮುಖಂಡ ನಾಗರಾಜ್ ಕೆ.ಎ., ತಾಲೂಕು ಅದ್ಧೂರಿ ಬೀಗರೂಟ ವಿರೋಧಿ ಆಂದೋಲನದ ನೋಪಿ ಶಂಕರ ಎಂ.ಎಲ್., ಚನ್ನಬಸಪ್ಪ ಡಿ.ಸಿ., ಲಾಲ್ ಬಹದ್ದೂರ್, ನಿರಂಜನ ಕೆ.ಸಿ., ಸುರೇಶ್, ಬಂಗಾರಪ್ಪ, ಲಿಂಗರಾಜ್, ಚಿದಾನಂದಮೂರ್ತಿ, ದೇವರಾಜ್, ಗಣೇಶ್, ಅನಿಲ್ ಕುಮಾರ್, ಕಲ್ಲಪ್ಪ, ಕೆರಿಯಪ್ಪ, ರವಿಶಂಕರ್ ಎಂ.ಎಲ್., ಜೈಕುಮಾರ್, ಢಾಕಪ್ಪ ಸೇರಿದಂತೆ ಗ್ರಾಮ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
