ಶಿವಮೊಗ್ಗ: ನಗರದ ನಡು ರಸ್ತೆಯಲ್ಲಿ ಏಕಾಏಕಿ ಹುತ್ತ ಪ್ರತ್ಯಕ್ಷವಾಗಿದೆ. ಪ್ರತ್ಯಕ್ಷವಾದ ಹುತ್ತಕ್ಕೆ ಪೂಜೆ ಸಹ ಮಾಡಲಾಗಿದೆ.
ರಸ್ತೆಯಲ್ಲಿ ಗುಂಡಿ ಬಿದ್ದರೆ ಅದನ್ನ ಲೆಕ್ಕಿಸದೇ ಸಂಬಂಧಪಟ್ಟ ಇಲಾಖೆಯವರು ಓಡಾಡೋದು ಸಾಮಾನ್ಯ. ಆದರೆ ಈ ಗುಂಡಿಗಳಿಗೆ ಎಡತಾಕಿ ಸಾರ್ವಜನಿಕರು ಮಾತ್ರ ತೊಂದರೆಗೊಳಪಡುತ್ತಲೇ ಇರುತ್ತಾರೆ. ಇಂತಹ ಅಧಿಕಾರಿಗಳಿಗೆ ಪಾಠ ಕಲಿಸಲೆಂದೇ ನಟ ಉಪೇಂದ್ರ ಅವರ ಪ್ರಜಾಕೀಯ ಪಾರ್ಟಿಯ ಸದಸ್ಯರು ಶಿವಮೊಗ್ಗದಲ್ಲಿ ಇಂದು ವಿನೂತನವಾಗಿ ಪ್ರತಿಭಟಿಸಿದ್ದಾರೆ.
Advertisement
Advertisement
ನಗರದ ಜೈಲ್ ವೃತ್ತದ ಮಧ್ಯ ಭಾಗದಲ್ಲಿ ಗುಂಡಿಯೊಂದು ಬಾಯಿ ತೆರೆದು ಕೂತಿತ್ತು. ಈ ಗುಂಡಿಯನ್ನು ಗಮನಿಸಿದ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ಶಿವಮೊಗ್ಗ ಜಿಲ್ಲೆಯ ಸಂಚಾಲಕ ವೆಂಕಟೇಶ್ ನೇತೃತ್ವದಲ್ಲಿ ಈ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ಮುಚ್ಚಲು ವಿನೂತನ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಈ ಗುಂಡಿ ಮೇಲೆ ಮಣ್ಣನ್ನು ಹಾಕಿ ಕಬ್ಬಿಣದ ರಾಡನ್ನು ನೆಟ್ಟು ರಾಜಕೀಯದ ಕೊಡುಗೆ ಬದಲಾವಣೆಗಾಗಿ ಎಂದು ನಾಮ ಫಲಕ ಹಾಕಿದ್ದಾರೆ. ಜೊತೆಗೆ 2 ಪ್ಲಾಸ್ಟಿಕ್ ಹಾವುಗಳನ್ನು ಇಟ್ಟು ಅದರ ಸುತ್ತ ಹೂವಿನ ಹಾರ ಹಾಕಿ ಗಂದಧ ಕಡ್ಡಿ ಹಚ್ಚಿದ್ದಾರೆ.
Advertisement
ಈ ಮೂಲಕ ದೇವರ ಗುಡಿಯನ್ನಾಗಿ ರೂಪಿಸಿ ಜನರು ಬಂದು ಪೂಜೆ ಮಾಡುವಂತಾಗಲಿ ಎಂದು ಗಮನ ಸೆಳೆದಿದ್ದಾರೆ. ಆದರೆ ಇವರು ಹೀಗೆ ಮಾಡಿದ್ದೆ ತಡ ಪಾಲಿಕೆ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಇದೀಗ ಈ ಮಣ್ಣನ್ನು ತೆಗೆದು, ಅದೇ ಮಣ್ಣಿನಿಂದ ಈ ಗುಂಡಿಯನ್ನು ಮುಚ್ಚಿದ್ದಾರೆ. ಈ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸಿ ಅಧಿಕಾರಿಗಳನ್ನ ಬಡಿದೆಬ್ಬಿಸುವ ಕೆಲಸ ಮಾಡಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.