– ರಾಶಿ ಹಾಕಿದ್ದ 150 ಕ್ವಿಂಟಾಲ್ ಬೆಳೆ ಹಾನಿ
ಶಿವಮೊಗ್ಗ: ಒಂದೆಡೆ ಅತಿವೃಷ್ಠಿ, ಮತ್ತೊಂದೆಡೆ ಅನಾವೃಷ್ಠಿ ಇದರ ನಡುವೆ ಕಷ್ಟಪಟ್ಟು ಸಾಲಸೋಲಾ ಮಾಡಿ ರೈತರೊಬ್ಬರು ಮೆಕ್ಕೆಜೋಳದ ಬೆಳೆ ಬೆಳೆದಿದ್ದರು. ಆದರೆ ಕಿಡಿಗೇಡಿಗಳು ಮೆಕ್ಕೆಜೋಳದ ರಾಶಿಗೆ ಬೆಂಕಿ ಹಾಕಿರುವ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದೆ.
ಮಲವಗೊಪ್ಪದ ನಿವಾಸಿ ತಿಮ್ಮನಾಯ್ಕ ಅವರು ತಮ್ಮ ಐದು ಎಕರೆ ಜಮೀನಿನಲ್ಲಿ ಸಾಲಸೋಲಾ ಮಾಡಿ ಕಷ್ಟಪಟ್ಟು ಮೆಕ್ಕೆ ಜೋಳ ಬೆಳೆದಿದ್ದರು. ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ದರ ಇದ್ದಿದ್ದರಿಂದ ದರ ಏರಿಕೆಯಾದ ಬಳಿಕ ಮಾರಾಟ ಮಾಡಿದರಾಯ್ತು ಅಂದುಕೊಂಡು ತನ್ನ ಜಮೀನಿನಲ್ಲಿಯೇ ಜೋಳದ ರಾಶಿ ಹಾಕಿದ್ದರು. ಆದರೆ ಮಂಗಳವಾರ ತಡ ರಾತ್ರಿ ಯಾರೋ ಕಿಡಿಗೇಡಿಗಳು ಮೆಕ್ಕೆಜೋಳದ ರಾಶಿಗೆ ಬೆಂಕಿ ಹಾಕಿದ್ದಾರೆ.
Advertisement
Advertisement
150 ಕ್ವಿಂಟಾಲ್‍ಗೂ ಅಧಿಕ ಮೆಕ್ಕೆಜೋಳದ ಬೆಳೆ ಸಂಪೂರ್ಣ ಹಾನಿಯಾಗಿದ್ದು, ಸುಮಾರು ಒಂದೂವರೆ ಲಕ್ಷ ರೂ.ದಷ್ಟು ಹಾನಿ ಸಂಭವಿಸಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದೆ. ಆದರೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಬೆಳೆ ಹಾನಿಗೆ ಕಾರಣರಾದ ಕಿಡಿಗೇಡಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಜೊತೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಮ್ಮ ಕುಟುಂಬಕ್ಕೆ ಆತ್ಮಹತ್ಯೆ ಒಂದೇ ದಾರಿ ಎಂದು ರೈತ ತಿಮ್ಮನಾಯ್ಕ ಅವರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.