– ಅಧಿವೇಶನ ನಡೆಸೋದಕ್ಕೆ ಹೇಗೆ ಬಿಡೋದಿಲ್ಲ ನೋಡ್ತೀನಿ
ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ದೊರೆಸ್ವಾಮಿ ಅವರಿಗೆ ಕಿವಿ ಮಾತು ಕೂಡ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸ್ವಾತಂತ್ರ್ಯ ಹೋರಾಟಗಾರರು, ಹಿರಿಯರಾದ ದೊರೆಸ್ವಾಮಿ ಅವರು ಪಕ್ಷಾತೀತರಾಗಿ ಇರಬೇಕು. ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ದೊರೆಸ್ವಾಮಿ ಅವರು ಯೋಚನೆ ಮಾಡಬೇಕು. ಕಾಂಗ್ರೆಸ್ ಏನು ಹೇಳುತ್ತದೆಯೋ ಹಾಗೆ ದೊರೆಸ್ವಾಮಿಯವರು ಕೂಡ ಹೇಳುತ್ತಿದ್ದಾರೆ. ಅವರು ಯಾವುದೋ ಒಂದು ಪಕ್ಷದ ಪರವಾಗಿರಬಾರದು. ಹೀಗೆ ಇದ್ದರೆ ಅವರ ಬಗ್ಗೆ ಹೇಗೆ ಗೌರವ ಬರುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಾನು ಯಾರಿಗೂ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ: ಯತ್ನಾಳ್
Advertisement
Advertisement
ನಾನು ಕೂಡ ದೊರೆಸ್ವಾಮಿಯವರ ಹೇಳಿಕೆಗಳನ್ನು ಖಂಡಿಸುತ್ತೇನೆ. ಯತ್ನಾಳ್ ಹೇಳಿಕೆ ವಿರುದ್ಧ ಕಾಂಗ್ರೆಸ್ ಧರಣಿ ನಡೆಸುತ್ತಿದೆ. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಲೆಗಡುಕ ಎಂದು ಹೇಳಿದ್ದರು. ಆಗ ಕಾಂಗ್ರೆಸ್ ಅವರನ್ನು ಪಕ್ಷದಿಂದಲೇ ಹೊರಗೆ ಹಾಕಬೇಕಿತ್ತು. ಪ್ರಪಂಚ ಮೆಚ್ಚಿದ ಪ್ರಧಾನಿಯನ್ನು ಒಬ್ಬ ಸಾಮಾನ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಕೊಲೆಗಡುಕ ಎಂದಿದ್ದರು ಎಂದು ಕಿಡಿ ಕಾರಿದರು.
Advertisement
ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿದ್ದ ಸಿದ್ದರಾಮಯ್ಯ ಅವರು ಈಗ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ಕ್ಷಮೆ ಕೋರುವವರೆಗೂ ವಿಧಾನಸಭೆ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಅವರು ಹೇಗೆ ಬಿಡೋದಿಲ್ಲ ಎಂಬುದನ್ನು ನಾನು ನೋಡುತ್ತೇನೆ ಎಂದು ಸವಾಲು ಹಾಕಿದರು.
Advertisement
ವಿಧಾನಸೌಧ ಏನು ಇವರ ಸ್ವಂತ ಆಸ್ತಿ ಅಲ್ಲ. ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಧಾನಸೌಧವಿಲ್ಲ. ಮಾಜಿ ಸಿಎಂಗೆ ತಾವು ಏನು ಹೇಳಿಕೆ ನೀಡುತ್ತಿದ್ದೇನೆ ಎಂಬ ಕಲ್ಪನೆ ಕೂಡ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.
ರಾಷ್ಟ್ರ ದ್ರೋಹಿ ಅಮೂಲ್ಯಗೆ 20 ವಯಸ್ಸು. ಆದರೆ ಅವಳಿಗೆ ವಯಸ್ಸಿನ ಆಧಾರದ ಮೇಲೆ ನಾವು ವಿರೋಧ ವ್ಯಕ್ತಪಡಿಸಿಲ್ಲ. ದೇಶದ ವಿರುದ್ಧ ಘೋಷಣೆ ಕೂಗಿದ್ದಕ್ಕೆ ವಿರೋಧಿಸಿದ್ದೇವೆ. ಅದರಂತೆ ದೊರೆಸ್ವಾಮಿ ಅವರ ವಯಸ್ಸು ನೋಡಿ ವಿರೋಧ ಮಾಡುತ್ತಿಲ್ಲ. ಅವರು ಹಿರಿಯರಾಗಿ ಎಲ್ಲರಿಗೂ ಮಾರ್ಗದರ್ಶನ ಮಾಡಿದ್ದರೆ ಅವರನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ ಎಂದು ಶಾಸಕ ಯತ್ನಾಳ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ದೇಶಕ್ಕೆ ಯಾವುದೇ ಲಾಭವಾಗಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಭಾರತದ ಜೊತೆ ನಾನು ನಿಲ್ಲುತ್ತೇನೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ. ಇದಕ್ಕಿಂತ ಮತ್ತೇನು ಬೇಕು ಎಂದು ಪ್ರಶ್ನಿಸಿದರು.
ಚೈನಾ ಮತ್ತು ಪಾಕಿಸ್ತಾನ ರಾಷ್ಟ್ರಗಳೇ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಗೆ ಬಾಯಿ ಮುಚ್ಚಿಕೊಂಡಿವೆ. ಸಿದ್ದರಾಮಯ್ಯ ಅವರಿಗೆ ಯಾವುದರಿಂದ ಲಾಭವಾಗಿದೆ ಅಂತ ಮೊದಲು ಹೇಳಲಿ ಎಂದು ಲೇವಡಿ ಮಾಡಿದರು.