ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಅವರು 2015ರಲ್ಲಿ ಕೊಲೆಯಾಗಿದ್ದ ವಿಶ್ವನಾಥ್ ಶೆಟ್ಟಿ ಮಗನ ಓದಿನ ಜವಾಬ್ದಾರಿ ಹೊತ್ತಿದ್ದಾರೆ.
2015ರಲ್ಲಿ ಪಿಎಫ್‍ಐ ಸಂಸ್ಥಾಪನಾ ದಿನಾಚರಣೆ, ಸಮಾವೇಶ ಅಂಗವಾಗಿ ಶಿವಮೊಗ್ಗದಲ್ಲಿ ನಡೆದ ಮೆರವಣಿಗೆ ಮತ್ತು ಆನಂತರದಲ್ಲಿ ಉಂಟಾದ ಗಲಭೆಯಲ್ಲಿ ಮೃತಪಟ್ಟ ಹಿಂದೂ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಮಗ ಯಶಸ್ ಓದಿನ ಜವಾಬ್ದಾರಿಯನ್ನು ಅಶ್ವಿನಿ ವಹಿಸಿಕೊಂಡಿದ್ದಾರೆ. ಯಶಸ್ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಮೃತ ವಿಶ್ವನಾಥ್ ಶೆಟ್ಟಿ ಪತ್ನಿಯ ತಾಯಿಯ ಜೊತೆ ಇದ್ದು, ಕೊಪ್ಪದಲ್ಲೇ 8ನೇ ತರಗತಿ ಓದುತ್ತಿದ್ದಾನೆ. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ
2015ರ ಫೆಬ್ರವರಿ 19 ರಂದು ಶಿವಮೊಗ್ಗದಲ್ಲಿ ನಡೆದ ಪಿಎಫ್‍ಐ ಸಮಾವೇಶ ಮುಗಿಸಿಕೊಂಡು ಹೋಗುವಾಗ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ ದುಷ್ಕರ್ಮಿಗಳು ವಿಶ್ವನಾಥ್ ಶೆಟ್ಟಿಯನ್ನು ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಸಾವಿನ ಕೆಲ ತಿಂಗಳ ಬಳಿಕ ಪತ್ನಿ ಕೂಡ ಸಾವನ್ನಪ್ಪಿದ್ದರು. ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ಅಪ್ಪ-ಅಮ್ಮ ಇಬ್ಬರೂ ಇಲ್ಲದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಅಜ್ಜಿಯ ಜೊತೆ ವಾಸವಿದ್ದನು.
2022ರ ಫೆಬ್ರವರಿ 20ರಂದು ಹರ್ಷ ರಾತ್ರಿ 10 ಗಂಟೆ ವೇಳೆಯಲ್ಲಿ ಊಟಕ್ಕೆ ಹೋಗುವಾಗ ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ ಏಳೆಂಟು ಜನ ಹರ್ಷ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದರು. ಇಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಯಶಸ್ ಮನೆಗೆ ಭೇಟಿ ನೀಡಿದ ಮೃತ ಹರ್ಷ ಸಹೋದರಿ ಅಶ್ವಿನಿ ಆ ಬಾಲಕನ ಓದಿನ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ.
ಅವನ ಓದಿನ ಜೊತೆ ಬೇರೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ನಾನೇ ನೋಡಿಕೊಳ್ಳುತ್ತೇನೆ. ನನಗೆ ಒಂಬತ್ತನೇ ತರಗತಿ ಓದುತ್ತಿರುವ ಮಗಳು ಇದ್ದಾಳೆ. ಇವನನ್ನು 8ನೇ ತರಗತಿ ಓದುತ್ತಿರುವ ಮಗ ಎಂದು ಭಾವಿಸಿಕೊಳ್ಳುತ್ತೇನೆ. ಅವನಿಗೆ ಏನು ಬೇಕು ಎಲ್ಲಾ ಮಾಡುತ್ತೇನೆ. ನೀವು ಅವನ ಬಗ್ಗೆ ಚಿಂತೆಯನ್ನೇ ಮಾಡಬೇಡಿ ಎಂದು ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ
ಅವನಿಗೆ ಏನೇ ಸಮಸ್ಯೆಯಾದರೂ ನನಗೆ ಕರೆ ಮಾಡಿ, ನಾನು ಬಂದು ಅವನನ್ನ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಅಜ್ಜಿ ಹಾಗೂ ಅವನನ್ನು ನೋಡಿಕೊಂಡು ಅವನ ಓದಿನ ಬಗ್ಗೆ ಮಾತ್ರ ಯೋಚನೆ ಮಾಡಿ, ಉಳಿದದ್ದು ನನಗೆ ಬಿಡಿ. ಅವನ ಓದು ಹಾಗೂ ಹಣದ ಬಗ್ಗೆ ಯೋಚನೆಯನ್ನೇ ಮಾಡಬೇಡಿ. ಅವನು ನನಗೆ ಹರ್ಷನಿದ್ದಂತೆ, ನೀವು ಯೋಚನೆ ಮಾಡಬೇಡಿ ಎಂದು ಮೃತ ವಿಶ್ವನಾಥ್ ಶೆಟ್ಟಿ ಪತ್ನಿಯ ತಂಗಿಗೆ ಧೈರ್ಯ ತುಂಬಿದ್ದಾರೆ.
ನಿಮಗೆ ಏನಾದರೂ ಬೇಕಾದರೆ ನನಗೆ ಕರೆ ಮಾಡಿ. ಅಜ್ಜಿ ಹಾಗೂ ಯಶಸ್ ಅವರ ಇಬ್ಬರ ಜವಾಬ್ದಾರಿ ನನ್ನದು ಎಂದು ಮೃತ ಹರ್ಷ ಅಕ್ಕ ಅಶ್ವಿನಿ ಹೇಳಿದ್ದಾರೆ. ವಿಶ್ವನಾಥ್ ಶೆಟ್ಟಿ ಪತ್ನಿಯ ತಂಗಿ ಕೂಲಿ ಕೆಲಸ ಮಾಡಿಕೊಂಡು ಯಶಸ್ ಹಾಗೂ ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದರು.