ಶಿವಮೊಗ್ಗ: ಸಪ್ತಪದಿ ತುಳಿಯುತ್ತಿದ್ದಾಗಲೇ ಮದುಮಗಳ ಮೇಲೆ ಪ್ರಿಯಕರನೇ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ.
ಸಾಗರ ತಾಲೂಕಿನ ಭೀಮನಕೋಣೆ ಕಾಪ್ಟೆಮನೆಯಲ್ಲಿ ವರನ ಸ್ವಗೃಹದಲ್ಲಿ ಭರತ್ ಎಂಬುವವರ ಜೊತೆ ಸುನಿತಾ (ಹೆಸರು ಬದಲಾಯಿಸಲಾಗಿದೆ) ಮದುವೆ ನಡೆಯುತ್ತಿತ್ತು. ಈ ವೇಳೆ ತಾಳಿ ಕಟ್ಟಿದ ನಂತರ ನವ ಜೋಡಿ ಸಪ್ತಪದಿ ತುಳಿಯುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಭಗ್ನ ಪ್ರೇಮಿ ಮದುಮಗಳ ಕುತ್ತಿಗೆಯನ್ನೇ ಚಾಕುವಿನಿಂದ ಇರಿದಿದ್ದಾನೆ.
ಈ ಸಂದರ್ಭದಲ್ಲಿ ತಪ್ಪಿಸಲು ಬಂದ ಹುಡುಗಿಯ ಚಿಕ್ಕಪ್ಪ ಗಂಗಾಧರಪ್ಪನ ಮೇಲೂ ಹಲ್ಲೆ ಮಾಡಿದ್ದಾನೆ. ತಕ್ಷಣ ಅಲ್ಲಿದ್ದವರು ಆತನನ್ನು ತಡೆದಿದ್ದಾರೆ. ನಂತರ ಹಲ್ಲೆಗೊಳಗಾದ ಸುನಿತಾ ಹಾಗೂ ಗಂಗಾಧರಪ್ಪ ಅವರನ್ನು ಸಾಗರ್ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ಆರೋಪಿ ನಂದನ್ ಶಿವಮೊಗ್ಗದ ನಿವಾಸಿಯಾಗಿದ್ದು, ಆರ್‍ಟಿಓ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದನು. ಸುಮಾರು 6 ತಿಂಗಳಿಂದ ಸುನಿತಾಳನ್ನು ಪ್ರೀತಿ ಮಾಡುತ್ತಿದ್ದನು. ಆದರೆ ಸುನಿತಾ ಈತನ ಪ್ರೀತಿಯನ್ನು ನೀರಾಕರಿಸಿದ್ದಳು. ಆದ್ದರಿಂದ ಈಗ ನನ್ನ ಬಿಟ್ಟು ಇಂದು ಬೇರೆಯವರ ಜೊತೆ ಮದುವೆಯಾಗುತ್ತಿದ್ದಾಳೆ ಎಂದು ಆಕ್ರೋಶಗೊಂಡು ಈ ರೀತಿ ಹಲ್ಲೆ ಮಾಡಿದ್ದಾನೆ.
ಇತ್ತ ಆರೋಪಿಯನ್ನು ಅಲ್ಲೇ ಇದ್ದ ಸಂಬಂಧಿಕರು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.