– ಬಿಜೆಪಿ ವಿರೋಧಿಗಳು ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ
ಶಿವಮೊಗ್ಗ: ಮಂಗಳೂರು ಬಾಂಬ್ ಪ್ರಕರಣ ಸಂಬಂಧ ಚರ್ಚೆಗಳಾಗುತ್ತಿವೆ. ಯಾರೇ ತಪ್ಪಿತಸ್ಥರಿದ್ದರೂ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು ಮಂಗಳೂರು ಪ್ರಕರಣದಲ್ಲಿ ಆರೋಪಿಗಳು ಯಾರೇ ಇರಲಿ ಅವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆ ನೀಡಬಾರದು ಎಂದು ಸಚಿವರು ಮಾಜಿ ಸಿಎಂಗೆ ಕಿವಿ ಮಾತು ಹೇಳಿದ್ದಾರೆ.
Advertisement
Advertisement
ನಾವು ಪೊಲೀಸರ ಜೊತೆ ಇದ್ದೇವೆ ಎಂಬ ಧೈರ್ಯ ತುಂಬುವ ಮಾತನಾಡಬೇಕು. ಹಗಲು ರಾತ್ರಿ ಕಷ್ಟ ಪಟ್ಟು, ಜನರ ಜೀವವನ್ನು ರಕ್ಷಿಸುವ ಪೊಲೀಸರ ವಿರುದ್ಧ ನಾವುಗಳು ಮಾತನಾಡಬಾರದು. ಪೊಲೀಸ್ ಇಲಾಖೆಯೇ ಬಾಂಬ್ ಇಟ್ಟಿದ್ದಾರೆ ಎಂಬ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲರೂ ಒಟ್ಟಿಗೆ ಸೇರಿ ದುಷ್ಕರ್ಮಿಗಳ ವಿರುದ್ಧ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಮುನ್ನಡೆಯುತ್ತಿದೆ. ಯಾರ ಬಗ್ಗೆಯೂ ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಸಚಿವರು ತಿಳಿಸಿದರು.
Advertisement
ಬಿಜೆಪಿ ವಿರೋಧಿಗಳು ಮತ್ತು ದೇಶದ್ರೋಹಿಗಳು ಈ ಎನ್.ಆರ್.ಸಿ. ಮತ್ತು ಸಿಎಎ ಬಗ್ಗೆ ಮಾತನಾಡುತ್ತ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಸಹ ಸಿಎಎ ಹಾಗೂ ಎನ್ ಆರ್ ಸಿ ವಿರೋಧ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
Advertisement
ಪಾಕಿಸ್ಥಾನ, ಬಾಂಗ್ಲದೇಶ ಮತ್ತು ಆಫ್ಘಾನಿಸ್ತಾನದಿಂದ ಉಟ್ಟ ಬಟ್ಟೆಯಲ್ಲಿ ಬಂದಿರುವ ಮುಸಲ್ಮಾನರಿಗೆ ಪೌರತ್ವ ನೀಡುವ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ, ಭಾರತದಲ್ಲಿರುವ ಒಬ್ಬನೇ ಒಬ್ಬ ಮುಸಲ್ಮಾನರಿಗೂ ತೊಂದರೆಯಾಗುವುದಿಲ್ಲ. ಇದು ಗೊತ್ತಿದ್ದು ಕೂಡ ದೇವೆಗೌಡರು ಸೇರಿದಂತೆ, ಕಾಂಗ್ರೆಸ್ಸಿಗರು ಈ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಯ್ದೆಯ ಬಗ್ಗೆ ದೇಶದ ಜನತೆಗೆ ಇಂದಲ್ಲ, ನಾಳೆ ಅರ್ಥವಾಗಿ ಕಾಯ್ದೆಯನ್ಬು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಸಂಪುಟ ವಿಸ್ತರಣೆ ವರಿಷ್ಠರು ತೀರ್ಮಾನ
ಸಚಿವ ಸಂಪುಟ ವಿಸ್ತರಣೆಗೆ ಕೇಂದ್ರ ಮತ್ತು ರಾಜ್ಯದ ವರಿಷ್ಠರು ಚರ್ಚೆ ಮಾಡಿ ಶೀಘ್ರ ತೀರ್ಮಾನ ಕೈಗೊಳ್ಳುತ್ತಾರೆ. 17 ಜನ ಕಾಂಗ್ರೆಸ್, ಜೆಡಿಎಸ್‍ನಿಂದ ಬಂದಿರುವ ಶಾಸಕರಿಂದಲೇ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಅವರ ಋಣವನ್ನು ನಾವು ತೀರಿಸುತ್ತೇವೆ. ಮುಂದಿನ ಒಂದು ವಾರದೊಳಗೆ ಸಂಪುಟ ವಿಸ್ತರಣೆ ಗೊಂದಲ ಬಗೆಹರಿಯಲಿದೆ ಎಂದರು.
ಏನೂ ಸಮಸ್ಯೆ ಇರಲಿಲ್ಲ ಎಂದರೆ ಇಷ್ಟೊತ್ತಿಗೆ ಸಂಪುಟ ವಿಸ್ತರಣೆ ಕಾರ್ಯ ಮುಗಿಯುತ್ತಿತ್ತು. ಪೂರ್ಣ ಬಹುಮತ ಬಿಜೆಪಿಗೆ ಬಂದಿದ್ದರೆ ಈ ಸಮಸ್ಯೆ ಸಹ ಇರುತ್ತಿರಲಿಲ್ಲ. ಯಾರಾದರೂ ಸಚಿವ ಸ್ಥಾನ ತ್ಯಾಗ ಮಾಡಬೇಕಾಗಿ ಬಂದರೆ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ಸೂಚಿಸಿದರೆ ತ್ಯಾಗ ಮಾಡಲೇಬೇಕು. ಆದರೆ ನಮ್ಮಲ್ಲಿ ಮೂಲ ಹಾಗೂ ವಲಸಿಗ ಎಂಬ ಬೇಧ ಭಾವವಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬಿಜೆಪಿಗೆ ಬಂದಿರುವ ಶಾಸಕರು ಬಿಜೆಪಿಯೊಂದಿಗೆ ಹಾಲು ಸಕ್ಕರೆ ರೀತಿ ಬೆರೆತುಕೊಳ್ಳುತ್ತಾರೆ. ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗ ಎಂಬುದು ತಾರಕಕ್ಕೇರಿದೆ. ಹೀಗಾಗಿಯೇ ಸಿದ್ದರಾಮಯ್ಯ ಅವರನ್ನೇ ಹೊರಗೆ ಹಾಕಬೇಕು ಎಂದು ಡಿಕೆಶಿ, ಪರಮೇಶ್ವರ್ ಕಾಯುತ್ತಿದ್ದಾರೆ ಎಂದರು.
ಕಾಂಗ್ರೆಸ್‍ನವರು ಹಾಲು, ಸಕ್ಕರೆಯಾಗದೇ, ವಿಷ ಮತ್ತು ಹಾಲಿನ ರೀತಿಯಲ್ಲಿ ಇದ್ದಾರೆ. ಅವರಲ್ಲಿನ ಗುಂಪುಗಾರಿಕೆ ಸರಿಪಡಿಸಿಕೊಳ್ಳದೇ ಕೇವಲ ಬಿಜೆಪಿ ವಿರುದ್ಧ ಟೀಕೆ ಮಾಡುವುದಷ್ಟೇ ಮಾಡುತ್ತಿದ್ದಾರೆ. ಆದರೆ ಅವರು ಇದರಲ್ಲಿಯೂ ಯಶಸ್ವಿಯಾಗುವುದಿಲ್ಲ ಎಂದು ಈಶ್ವರಪ್ಪ ಕೈ ನಾಯಕರ ವಿರುದ್ಧ ವ್ಯಂಗ್ಯವಾಡಿದರು.