ಶಿವಮೊಗ್ಗ: ಸಹೋದರ ಮತ್ತು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಹೇಳಿದ ಮಾತು ಸತ್ಯಕ್ಕೆ ದೂರವಾದದ್ದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ವಿಜಯೇಂದ್ರ ಅವರ ಹೇಳಿಕೆಯನ್ನು ಅಲ್ಲಗಳೆದರು. ನಾಲ್ಕು ಗೋಡೆ ನಡುವೆ ನಡೆಯಬೇಕಾದ ಮಾತುಗಳು ಸಾರ್ವಜನಿಕವಾಗಿ ಆಡಬಾರದು. ರಾಜ್ಯದ ಖಜಾನೆ ಖಾಲಿಯಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಜಾನೆ ಖಾಲಿ ಎಂಬರ್ಥದಲ್ಲಿ ಹೇಳಿಲ್ಲ. ಅವರ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಬಾರದು. ದೇವರ ದಯೆಯಿಂದ ನಮ್ಮ ರಾಜ್ಯ ಸರ್ಕಾರದಲ್ಲಿ ಆ ಪರಿಸ್ಥಿತಿ ಇಲ್ಲ. ಯಾವುದೇ ಕ್ಷೇತ್ರಕ್ಕಾಗಲೀ, ಅದರ ಮಾನ್ಯತೆ ಮನಗಂಡು ಹಣ ಬಿಡುಗಡೆ ಮಾಡಬೇಕಾಗುತ್ತದೆ. ಅದರ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರಷ್ಟೆ ಎಂದು ತಂದೆಯ ಮಾತುಗಳನ್ನು ಸಮರ್ಥಿಸಿಕೊಂಡರು.
Advertisement
ಕೇಂದ್ರ ಸರ್ಕಾರ ಯಾವುದೇ ವರದಿಯನ್ನು ತಿರಸ್ಕೃತ ಮಾಡಿಲ್ಲ. ಇದೊಂದು ತಪ್ಪು ತಿಳುವಳಿಕೆ. ಶುಕ್ರವಾರ ಮಧ್ಯಂತರ ಪರಿಹಾರವಾಗಿ 1200 ಕೋಟಿ ರೂ. ಕೇಂದ್ರ, ನೆರೆ ಪರಿಹಾರ ಬಿಡುಗಡೆ ಮಾಡಿದೆ. ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಪರಿಸ್ಥಿತಿ ಈಗಿಲ್ಲ. ಈ ಹಿಂದೆ ಮನಮೋಹನ್ ಸಿಂಗ್ ಕಾಲದಲ್ಲಿ ಆ ಪರಿಸ್ಥಿತಿ ಇತ್ತು. ಆದರೆ ಈಗ ರೈತರ ಮನಸ್ಥಿತಿ ಅರ್ಥ ಮಾಡಿಕೊಳ್ಳುವ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗಳು ಇದ್ದಾರೆ ಎಂದು ಹೇಳಿದರು.