ಹಾಸನ: ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿಯಾಗಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಶಂಖನಾದ ಮೊಳಗಿಸಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಮಠದಲ್ಲಿ ಮಾತನಾಡಿದ ಅವರು, ಪಕ್ಷಕ್ಕಾಗಿ ಶಿಸ್ತಿನ ಸಿಪಾಯಿಯಾಗಿ ದುಡಿದ ಶಿವಕುಮಾರ್ ಅವರಿಗೆ ಒಂದು ಅವಕಾಶ ನೀಡಬೇಕು. ಇದು ಎಲ್ಲರ ಒಕ್ಕೊರಲ ಕೂಗಾಗಿದ್ದು ಉಳಿದ ಎರಡೂವರೆ ವರ್ಷದ ಅವಧಿಯನ್ನು ಡಿಕೆ ಶಿವಕುಮಾರ್ ಅವರಿಗೆ ಕೊಡಬೇಕು. ಅವರ ವಿಷನ್‌ಗೆ ಪೂರಕವಾದ ದೃಷ್ಟಿಯಿಂದ ಅಭಿವೃದ್ಧಿ ಮಾಡಲು ಕಾಂಗ್ರೆಸ್ ನಾಯಕರು ಅವಕಾಶ ಮಾಡಿಕೊಡಬೇಕು ಎಂದು ಹೇಳುವ ಮೂಲಕ ಡಿಕೆಶಿ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: ಡಿಕೆಶಿ ಭೇಟಿ ಬಳಿಕ ಆಪ್ತರ ಜೊತೆ ಜಾರಕಿಹೊಳಿ ಡಿನ್ನರ್ ಮೀಟಿಂಗ್
ಕೆಂಗಲ್ ಹನುಮಂತಯ್ಯ, ಕೆಸಿ ರೆಡ್ಡಿ ಕಾಲದಿಂದ ಕೂಡ ರಾಜ್ಯವನ್ನು ಆಳಿ ಅಭಿವೃದ್ಧಿ ಪಥದಲ್ಲಿ ಒಯ್ದಿದ್ದಾರೆ. ದೇವೇಗೌಡರು, ಎಸ್.ಎಂ.ಕೃಷ್ಣ, ಹೆಚ್‌ಡಿಕೆ ಅವರು ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಸಮುದಾಯದಿಂದ ರಾಜ್ಯ ಕಟ್ಟಿ ಬೆಳೆಸಲು ಹೋಗಿರುವ ನಾಯಕರಂತೆ ಇವರು ಯಾವುದೇ ಸಂದರ್ಭದಲ್ಲಿ ಪಕ್ಷ ನಿಷ್ಟೆ ಬಿಟ್ಟು ಕೊಟ್ಟವರಲ್ಲ. ಪಕ್ಷದ ಉಳಿವು ಏಳಿಗೆಗಾಗಿ ಎಷ್ಟೋ ನೋವನ್ನು ಏಕಾಂಗಿಯಾಗಿ ನಿಂತು ಸ್ವೀಕರಿಸಿ ಹೋರಾಟ ಮಾಡಿದ್ದಾರೆ. ಅಂತಹ ಸೇವೆ ಮಾಡಿರುವ ಶಿವಕುಮಾರ್ ಸಿಎಂ ಆಗುತ್ತಾರೆ ಎನ್ನುವ ಭಾವನೆ ಎಲ್ಲರಿಗು ಇದೆ, ನಮಗೂ ಇದೆ. ಆ ಭಾವನೆಗೆ ಪೂರಕವಾಗಿ ಅವರ ಹೈಕಮಾಂಡ್ ಕೆಲಸ ಮಾಡಲಿದೆ ಎನ್ನುವ ಭರವಸೆ ಇದೆ ಎಂದರು.
ಡಿ.ಕೆ.ಶಿವಕುಮಾರ್ ಶ್ರೀ ಮಠದ ಸದ್ಭಕ್ತರು. ಅವರಿಗೆ ತಮ್ಮ ಇಚ್ಚೆ ಆಗುತ್ತೆ ಎನ್ನುವ ಭರವಸೆ ಇದೆ. ಆಗದೇ ಹೋದ ಸಂದರ್ಭದಲ್ಲಿ ಸಮಸ್ಯೆ ಸೃಷ್ಟಿ ಆದರೆ ನಮ್ಮನ್ನು ಭೇಟಿ ಆಗಬಹುದೇದನೋ? ಎರಡು ವರ್ಷ ಕಾದು ನೋಡಿದ್ದೇವೆ . ಆದರೆ ಈಗ ಆಗುತ್ತಿರುವ ಬೆಳವಣಿಗೆ ನೋಡಿದರೆ ಏನೋ ವ್ಯತ್ಯಾಸ ಆದಂತೆ ಕಾಣುತ್ತಿದೆ. ಪಕ್ಷ ಅಧಿಕಾರಕ್ಕೆ ಬಂದಾಗ ಕೂಡ ದೊಡ್ಡ ಚರ್ಚೆ ನಡೆದಿತ್ತು. ಅವರ ಅಧ್ಯಕ್ಷತೆಯಲ್ಲೇ ಪಕ್ಷ ಚುನಾವಣೆಗೆ ಹೋಗಿತ್ತು. ಅವರು ಪಕ್ಷವನ್ನು ಅದಿಕಾರಕ್ಕೆ ತಂದರು. ಅಧಿಕಾರ ಬಂದಾಗ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯಾಗಿದೆ ಎನ್ನುವ ಭಾವನೆ ಜನ ಸಮುದಾಯದಲ್ಲಿ ಇದ್ದು ಇದನ್ನು ಸೂಕ್ತವಾಗಿ ಬಗೆಹರಿಸಬೇಕು ಎಂದು ತಿಳಿಸಿದರು.

