ಮುಂಬೈ: ಮನೆಯ ಬಳಿಯೇ ಶಿವಸೇನಾ ನಾಯಕರೊಬ್ಬರನ್ನು ದುಷ್ಕರ್ಮಿಗಳ ತಂಡ ಚೂರಿಯಿಂದ ಇರಿದು ಬರ್ಬರವಾಗಿ ಕೊಲೆಗೈದ ಘಟನೆ ಮುಂಬೈನ ಕಂಡಿವಿಲಿ ಎಂಬಲ್ಲಿ ನಡೆದಿದೆ.
ಅಶೋಕ್ ಸಾವಂತ್(62) ಮೃತ ಶಿವಸೇನಾ ನಾಯಕ. ಭಾನುವಾರ ರಾತ್ರಿ 10.45ರ ಸುಮಾರಿಗೆ ಈ ಘಟನೆ ನಡೆದಿದೆ. ಮುಂಬೈನ ಮಾಜಿ ಕಾರ್ಪೋರೇಟರ್ ಹಾಗೂ ಉದ್ಯಮಿ ಆಗಿದ್ದ ಸಾವಂತ್ ಅವರು ನಿನ್ನೆ ರಾತ್ರಿ ತನ್ನ ಗೆಳೆಯನ್ನು ಭೇಟಿ ಮಾಡಿ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಮನೆಯ 200 ಮೀಟರ್ ದೂರದಲ್ಲೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಗೈದಿದ್ದಾರೆ.
ವರದಿಗಳ ಪ್ರಕಾರ, ಸಾಮ್ತಾ ನಗರದಲ್ಲಿರೋ ಸಾವಂತ್ ಅವರ ಮನೆಯ ಸಮೀಪ ಇಬ್ಬರು ವ್ಯಕ್ತಿಗಳು ವಾಹನದಲ್ಲಿ ಸಾವಂತ್ ಕೊಲೆಗೆ ಹೊಂಚು ಹಾಕಿ ಕುಳಿತಿದ್ದರು. ಸಾವಂತ್ ಬರುತ್ತಿದ್ದಂತೆಯೇ ಅವರ ಮೇಲೆ ಏಕಾಏಕಿ ದಾಳಿ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಾವಂತ್ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶತಾಬ್ಧಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ. ಇನ್ನು ಘಟನೆ ಸ್ಥಳದ ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಿದ್ದಾರೆ.
ಉದ್ಯಮಿ ಆಗಿದ್ದ ಸಾವಂತ್ ಅವರಿಗೆ ಕೆಲ ದಿನಗಳ ಹಿಂದೆ ಸುಲಿಗೆಕೋರರ ಕರೆಗಳು ಬರುತ್ತಿದ್ದವು. ಹೀಗಾಗಿ ಅವರೇ ಈ ಕೃತ್ಯ ಎಸಗಿರಬಹುದೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಸಾವಂತ್ ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ.