ನವದೆಹಲಿ: ಜೆಡಿಯು ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿದ್ದಾರೆ. ಈ ಮೂಲಕ 3 ವರ್ಷದಲ್ಲಿ ಮೂರು ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಸಾಂಗತ್ಯವನ್ನು ತೊರೆದು ಹೊರಬಂದಿವೆ.
3 ಕೃಷಿ ಕಾನೂನು ಜಾರಿ ಮಾಡಿದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಪಂಜಾಬ್‍ನ ಪ್ರಮುಖ ಪ್ರಾದೇಶಿಕ ಪಕ್ಷ ಅಕಾಲಿ ದಳ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿತ್ತು. ಕೃಷಿ ಕಾನೂನುಗಳನ್ನು ರದ್ದು ಮಾಡಲು ಅಕಾಲಿದಳ ನಾಯಕರು ಒತ್ತಾಯಿಸಿದ್ದರು. ಆದರೆ ಆರಂಭದಲ್ಲಿ ಕಾನೂನು ವಾಪಸ್ ಪಡೆಯಲು ಹಿಂದೇಟು ಹಾಕಿದ ಹಿನ್ನೆಲೆ ಅಕಾಲಿದಳ ಬಿಜೆಪಿ ಜೊತೆಗಿನ ಮೈತ್ರಿ ಕಡಿದು ಹಾಕಿತ್ತು.
Advertisement
Advertisement
ಇನ್ನು ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಕಡಿದು ಕಾಂಗ್ರೆಸ್ ಎನ್‍ಸಿಪಿ ಜೊತೆಗೆ ಸೇರಿ ಸರ್ಕಾರ ರಚನೆ ಮಾಡಿತ್ತು. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಪ್ರಬಲ ಮೈತ್ರಿ ಹೊಂದಿದ್ದವು. ಆದರೆ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿ ಸಿಎಂ ಹುದ್ದೆ ನೀಡಲು ಒಪ್ಪದ ಬಿಜೆಪಿ ಮೈತ್ರಿಯಿಂದ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹೊರ ಬಂದಿದ್ದರು.
Advertisement
Advertisement
ಇನ್ನು ಜೆಡಿಯು ಬಿಹಾರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆಗಿನ ಮೈತ್ರಿಯಿಂದ ಹೊರಬಂದಿದೆ. ಮಹಾರಾಷ್ಟ್ರ ಮಾದರಿಯಲ್ಲಿ ಜೆಡಿಯುವನ್ನು ಇಬ್ಭಾಗಿಸಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿರುವ ನಿತೀಶ್ ಕುಮಾರ್ ಪಕ್ಷದ ಉಳಿವಿಗಾಗಿ ಎನ್‍ಡಿಎ ಒಕ್ಕೂಟದಿಂದ ದೂರವಾಗಿದ್ದಾರೆ. ಇದನ್ನೂ ಓದಿ: ನಿತೀಶ್ ಕುಮಾರ್ 2024ರ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ? – ಬಿಹಾರದಲ್ಲಿ ಇಂದು 2ನೇ ಇನ್ನಿಂಗ್ಸ್ ಆರಂಭ
ಲೋಕಸಭೆ ಚುನಾವಣೆ 2 ವರ್ಷ ಬಾಕಿ ಇರುವಾಗ ಈ ಮೂರು ಪ್ರಬಲ ಪ್ರಾದೇಶಿಕ ಪಕ್ಷಗಳು ಎನ್‍ಡಿಎ ಒಕ್ಕೂಟ ತೊರೆದಿರುವುದು ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಏನಾಗಬಹುದು ಎಂಬ ವಿಶ್ಲೇಷಣೆ ಆರಂಭವಾಗಿದೆ. ವಿಶೇಷವಾಗಿ ಮಹಾರಾಷ್ಟ್ರ, ಬಿಹಾರದಲ್ಲಿ ಪ್ರಾದೇಶಿಕ ಪಕ್ಷಗಳ ಸಹಾಯದಿಂದ ಬಿಜೆಪಿ ಹೆಚ್ಚು ಪ್ರಬಲವಾಗಿತ್ತು. ಈ ಪಕ್ಷಗಳ ಬಿಜೆಪಿ ದೊಸ್ತಿ ಮುರಿದುಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಲಾಭವಾಗುತ್ತಾ, ನಷ್ಟವಾಗುತ್ತಾ ಎಂಬ ಪ್ರಶ್ನೆಗೆ ಲೋಕಸಭಾ ಚುನಾವಣೆ ಉತ್ತರ ನೀಡಲಿದೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಕೊರೊನಾ – ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಪಾಸಿಟಿವ್