ಒಂದು ದಿನದ ಭಾಗ್ಯ – 22 ವರ್ಷಗಳಿಂದ ಬ್ಯಾಂಕ್ ಲಾಕರ್‌ನಲ್ಲಿದ್ದ ಲಿಂಗಕ್ಕೆ ಭಕ್ತರ ಅಭಿಷೇಕ

Public TV
2 Min Read
collage smg

ಶಿವಮೊಗ್ಗ: ಸರ್ಕಾರದ ಮಧ್ಯಪ್ರವೇಶದಿಂದಾಗಿ 22 ವರ್ಷಗಳ ಕಾಲ ಬ್ಯಾಂಕ್ ಲಾಕರ್‌ನಲ್ಲಿದ್ದ  ಶಿವಲಿಂಗಕ್ಕೆ ಭಕ್ತರು ಇಂದು ಅಭಿಷೇಕ ಮಾಡಿದ್ದಾರೆ.

ಸಾಗರ ತಾಲೂಕಿನ ಕೆಳದಿ ರಾಜಗುರು ಬಂದಗದ್ದೆ ಹಿರೇಮಠದ ಪಚ್ಚೆ ಲಿಂಗಕ್ಕೆ 600 ವರ್ಷದ ಇತಿಹಾಸವಿದೆ. 1 ಕೆಜಿ ತೂಕದ ಪಚ್ಚೆಲಿಂಗವನ್ನು ಕೆಳದಿ ಅರಸರು ರಾಜಗುರು ಮಠಕ್ಕೆ ನೀಡಿದ್ದರು. ಅಂದಿನಿಂದ ಪ್ರತಿವರ್ಷ ನವರಾತ್ರಿ ಸೇರಿದಂತೆ ವಿಶೇಷ ಸಂದರ್ಭದ ದಿನಗಳಲ್ಲಿ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತಿತ್ತು.’

smg

ಮಠದ ಹಿಂದಿನ ಸ್ವಾಮೀಜಿ ಗುರು ಸಿದ್ದದೇವರು ಆರ್ಥಿಕ ಸಂಕಷ್ಟದಿಂದಾಗಿ ಪಚ್ಚೆ ಲಿಂಗವನ್ನು ಶಿವಮೊಗ್ಗದ ಎಸ್‍ಬಿಐ ಬ್ಯಾಂಕಿನಲ್ಲಿಟ್ಟು 2.80 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ನಂತರದಲ್ಲಿ ಸಾಲವನ್ನು ತೀರಿಸಲಾಗಿತ್ತು. ಆದರೆ ಇಂದಿನ ಸ್ವಾಮೀಜಿ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಸದ್ಯ ಬೆಳಗಾವಿಯ ಮಠವೊಂದರಲ್ಲಿ ಸ್ವಾಮೀಜಿಯಾಗಿರುವ ಮೃತ್ಯುಂಜಯ ಸ್ವಾಮೀಜಿಯವರ ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಮೃತ್ಯುಂಜಯ ಸ್ವಾಮೀಜಿ ಆಪ್ತರು ನ್ಯಾಯಾಲಯದಲ್ಲಿ ದಾವೆ ಹೂಡಿ ಮಠದ ಆಸ್ತಿಯನ್ನು ಪರಭಾರೆ ಮಾಡದಂತೆ ತಡೆಯಾಜ್ಞೆ ತಂದಿದ್ದರು.

ತಡೆಯಾಜ್ಞೆಯಿಂದಾಗಿ ಭದ್ರತೆ ದೃಷ್ಟಿಯಿಂದ ಪಚ್ಚೆಲಿಂಗ ಮತ್ತೆ ಬ್ಯಾಂಕಿನ ಲಾಕರ್ ಸೇರಿತು. ಆದರೆ ಈ ಬಾರಿ ನವರಾತ್ರಿಯ ಕೊನೆಯ ಒಂದು ದಿನ ಪಚ್ಚೆಲಿಂಗ ದರ್ಶನ ಮಾಡಬೇಕು ಎಂಬುದು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಭಕ್ತರ ಆಸೆಯಾಗಿತ್ತು. ಅದರಂತೆ ಸ್ಥಳೀಯ ಶಾಸಕ ಹಾಲಪ್ಪ ನೇತೃತ್ವದಲ್ಲಿ ತೆರಳಿದ್ದ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪಚ್ಚೆಲಿಂಗ ದರ್ಶನಕ್ಕೆ ಮನವಿ ಸಲ್ಲಿಸಿತ್ತು.

smg 2

ಭಕ್ತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು ಇಂದು ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ತಹಶೀಲ್ದಾರ್ ಸಮ್ಮುಖದಲ್ಲಿ ಬಿಗಿ ಭದ್ರತೆಯೊಂದಿಗೆ ಇಂದು ಸಾಗರ ಖಜಾನೆಯಿಂದ ಪಚ್ಚೆಲಿಂಗ ತೆಗೆದುಕೊಂಡು ಹೋಗಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಚ್ಚೆಲಿಂಗ 22 ವರ್ಷಗಳ ನಂತರ ಮಠಕ್ಕೆ ಆಗಮಿಸುತ್ತಿದ್ದಂತೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಅಲ್ಲದೇ ಸ್ವಾಮೀಜಿಯವರು ಪಚ್ಚೆಲಿಂಗಕ್ಕೆ ಜಲಾಭಿಷೇಕ, ಕ್ಷೀರಾಭಿಷೇಕ, ಗಂಧಾಭಿಷೇಕ, ಬಿಲ್ವಾರ್ಚನೆ ಮಾಡಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

22 ವರ್ಷಗಳ ನಂತರ ಪಚ್ಚೆಲಿಂಗ ದರ್ಶನ ಮಾಡಿದ್ದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದರು. ಪ್ರತಿ ವರ್ಷ ನವರಾತ್ರಿ ದಿನದಂದು ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ. ಅಲ್ಲದೇ ಇಂದು ರಾತ್ರಿ ಮತ್ತೆ ಬಿಗಿ ಭದ್ರತೆ ನಡುವೆ ಪಚ್ಚೆಲಿಂಗ ಲಾಕರ್ ಸೇರಿದೆ.

Share This Article
Leave a Comment

Leave a Reply

Your email address will not be published. Required fields are marked *