ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮರಕೋತಿ ಆಟವಾಡಲು ಸರಿ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಮತದಾರರಿಗೆ ಮತ್ತು ಸಾರ್ವಜನಿಕರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಘನತೆಗೆ ತಕ್ಕಂತೆ ಮಾತನಾಡದೇ, ಮೋದಿಯವರಿಂದ ಹಿಡಿದು ಯಡಿಯೂರಪ್ಪನವರೆಗೂ ಟೀಕಿಸಿ ಏಕಪಾತ್ರಾಭಿನಯ ಮಾಡಿದರು. ಈಗ ಮತದಾರರು ಅವರಿಗೆಲ್ಲರಿಗೂ ಒಳ್ಳೆಯ ಪಾಠ ಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ನಮ್ಮ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಸೋಲಿಸಲು ಮೈತ್ರಿಕೂಟದ ನಾಯಕರೆಲ್ಲರೂ ಶಿವಮೊಗ್ಗಕ್ಕೆ ಬಂದಿದ್ದರು. ಸಚಿವ ಡಿ.ಕೆ. ಶಿವಕುಮಾರ್ ಶಿವಮೊಗ್ಗಕ್ಕೆ ಬಂದು ಟೈರ್ ಟ್ಯೂಬ್ ಗಿರಾಕಿಯಾಗಿ ಬಿಟ್ಟಿದ್ದರು. ಅವರಿಗೂ ಮಧು ಬಂಗಾರಪ್ಪ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಮೊದಲೇ ಗೊತ್ತಿತ್ತು. ಆದರೆ ಮಧು ಬಂಗಾರಪ್ಪರ ಒತ್ತಾಯಕ್ಕೆ ಬಂದು ಪ್ರಚಾರ ಮಾಡಿ ಹೋದರು ಎಂದು ಡಿ.ಕೆ ಶಿವಕುಮಾರ್ ಅವರ ಕಲೆಳೆದರು.
Advertisement
Advertisement
ಮಾಜಿ ಪ್ರಧಾನಿ ದೇವೇಗೌಡರು ಮತ್ತು ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಂದಂಕಿ ದಾಟಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಅವರೇ ಒಂದೊಂದು ಅಂಕಿ ಇಟ್ಟುಕೊಂಡು ಅವಮಾನಕ್ಕೊಳಗಾಗಿದ್ದಾರೆ. ನಿಖಿಲ್ ಮಂಡ್ಯದಲ್ಲಿ ಸೋತರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದ ಸಚಿವ ಪುಟ್ಟರಾಜು ಈಗ ಎಲ್ಲಿ ಹೋಗಿದ್ದಾರೆ. ಅದೇ ರೀತಿ ದೇವೇಗೌಡರು ಕೂಡ ಹೇಳಿಕೆ ನೀಡಿ ಈಗ ರಾಜೀನಾಮೆ ನೀಡದೆ ಚುನಾವಣೆಗೆ ನಿಂತು ಸೋತಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ನಾಯಕರನ್ನು ತೊದಲರಿಗೆ ಹೋಲಿಸಿದ ಆಯನೂರು, ತೊದಲು ತೊದಲಾಗಿ ಮಾತನಾಡುವ ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಇಬ್ಬರು ಈಗ ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೈತ್ರಿನಾಯಕರ ಕಾಲೆಳೆದರು.