ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನಿರ್ದೇಶಕಿಯೊಬ್ಬರ ಆಗಮನವಾಗಿದೆ ಮತ್ತು ಅವರ ಕಡೆಯಿಂದ ಇನ್ನೊಂದಷ್ಟು ಸಂವೇದನಾಶೀಲ ಕಥೆಗಳು ದೃಶ್ಯರೂಪ ಪಡೆಯಲಿವೆ. ಸಂಗಾತಿ ಎಂಬ ಕಿರು ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಇಂಥಾದ್ದೊಂದು ಸೂಚನೆ ಸ್ಪಷ್ಟವಾಗಿಯೇ ಸಿಕ್ಕಿದೆ. ಈ ಕಿರುಚಿತ್ರಕ್ಕೆ ಸಿಕ್ಕಿರೋ ವ್ಯಾಪಕ ಮೆಚ್ಚುಗೆಗಳು ಅದನ್ನು ಮತ್ತಷ್ಟು ಖಚಿತವಾಗಿಸಿವೆ!
ಕಿರುಚಿತ್ರಗಳಿಗೆ ಇರುವುದು ಅತ್ಯಲ್ಪ ಕಾಲಾವಧಿ. ಅಷ್ಟರಲ್ಲಿಯೇ ಹೇಳಬೇಕಿರೋದನ್ನು ಅಚ್ಚುಕಟ್ಟಾಗಿ ಹೇಳಿ ಅದು ನೋಡಿದವರ ಮನಸಲ್ಲಿಯೇ ಮತ್ತೆ ಅರಳಿಕೊಳ್ಳುವಂತೆ ಮಾಡೋದು ಕಿರು ಚಿತ್ರಗಳ ನಿಜವಾದ ಯಶಸ್ಸು. ಈ ನಿಟ್ಟಿನಲ್ಲಿ ಶೀತಲ್ ಶೆಟ್ಟಿ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ.
Advertisement
Advertisement
ಸಂಗಾತಿ ಎಂಬುದು ಒಂಟಿ ಹೆಣ್ಣೊಬ್ಬಳ ಸುತ್ತಾ ಹರಡಿಕೊಂಡಿರೋ ಕಥಾನಕ. ಡ್ರಾಮಾ ಟೀಚರ್ ಒಬ್ಬಳು ಗಂಡ ಮನೆಯನ್ನೆಲ್ಲ ತೊರೆದು, ಒಬ್ಬಂಟಿತನವನ್ನೇ ಹಚ್ಚಿಕೊಂಡು ಬದುಕೋದರ ಸುತ್ತಾ ಕಥೆ ಬಿಚ್ಚಿಕೊಳ್ಳುತ್ತೆ. ಗಂಡನೆಂಬ ನೆರಳು, ಸಂಬಂಧಗಳ ಆಸರೆ ಇಲ್ಲದೆ ಹೆಣ್ಣೊಬ್ಬಳಿಗೆ ಅಸ್ತಿತ್ವವೇ ಇಲ್ಲ ಎಂಬುದು ಈ ನೆಲದ ಪಾರಂಪರಿಕ ನಂಬಿಕೆ. ಅದರ ಪದತಲದಲ್ಲಿ ಕಾಲಾಂತರಗಳಿಂದಲೂ ಹೆಣ್ತನದ ನಿಜವಾದ ತುಮುಲಗಳು ಪತರುಗುಟ್ಟುತ್ತಿವೆ.
Advertisement
ಹೆಣ್ಣಿನ ಪರಿಭಾಷೆಯಲ್ಲಿ ಸಾಂಗತ್ಯ ಅಂದರೇನು ಅಂದರೆ ಗಂಡಿನ ಡಿಕ್ಷನರಿಯಲ್ಲಿ ಬೇರೆಯದ್ದೇ ಅರ್ಥಗಳಿವೆ. ಆದರೆ ಆಕೆಯ ಕಣ್ಣಲ್ಲಿ ಸಾಂಗತ್ಯವೆಂದರೆ ಒಂದು ನಂಬಿಕೆ, ನಿಷ್ಕಾರಣ ಕಾಳಜಿ. ಅದರ ನಡುವಲ್ಲಾಕೆ ನೆಮ್ಮದಿಯಾಗಿ ಬದುಕಿ ಬಿಡುತ್ತಾಳೆ. ಈ ಸತ್ಯವನ್ನು ಒಂಟಿ ಮಹಿಳೆ ಬೀದಿ ನಾಯಿ ಮರಿಯೊಂದಕ್ಕೆ ಆರೈಕೆ ಮಾಡಿ ಅದನ್ನು ಹಚ್ಚಿಕೊಳ್ಳೋದರ ಮೂಲಕ ಶೀತಲ್ ಶೆಟ್ಟಿ ಪರಿಣಾಮಕಾರಿಯಾಗಿ ದೃಷ್ಯೀಕರಿಸಿದ್ದಾರೆ.
Advertisement
ಕುತೂಹಲ ಉಳಿಸಿಕೊಳ್ಳುವ ಜಾಣ್ಮೆಯೂ ಸೇರಿದಂತೆ ಒಟ್ಟಾರೆಯಾಗಿ ಎಲ್ಲ ವಿಭಾಗಗಳಲ್ಲಿಯೂ ಈ ಕಿರು ಚಿತ್ರ ಗಮನ ಸೆಳೆಯುವಂತಿದೆ. ಈ ಮೂಲಕ ಕನ್ನಡದಲ್ಲಿ ವಿರಳ ಸಂಖ್ಯೆಯಲ್ಲಿರುವ ಮಹಿಳಾ ನಿರ್ದೇಶಕಿಯರ ಸಾಲಿನಲ್ಲಿ ಶೀತಲ್ ಸೇರಿಕೊಂಡಿದ್ದಾರೆ. ಅವರ ಮುಂದಿನ ನಡೆ ಚಿತ್ರ ನಿರ್ದೇಶನದತ್ತ ಸಾಗುವ ಲಕ್ಷಣಗಳೂ ಇವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv